ಭದ್ರಾ, ಮುತ್ತೋಡಿ ಅಭಯಾರಣ್ಯದಲ್ಲಿ ಸಫಾರಿಗೆ ಹೆಚ್ಚಿದ ಬೇಡಿಕೆ
ಚಿಕ್ಕಮಗಳೂರು, ಮೇ 9: ನಿಸರ್ಗ ಮತ್ತು ಪ್ರಾಣಿ ಪ್ರಿಯರಿಗೆ ಜಿಲ್ಲೆಯ ಲಕ್ಕವಳ್ಳಿ ಭದ್ರಾ ವನ್ಯಜೀವಿ ವಿಭಾಗ ಮತ್ತು ಮುತ್ತೋಡಿ ಅಭಯಾರಣ್ಯ ಅಚ್ಚುಮೆಚ್ಚಿನ ತಾಣ. ಇಲ್ಲಿನ ಸಫಾರಿಗೆ ಮನ ಸೋಲದವರಿಲ್ಲ. ಕಾಡುಪ್ರಾಣಿಗಳ ತುಂಟಾಟ, ಗಂಭೀರ ನಡಿಗೆ, ಹಕ್ಕಿಗಳ ಚಿಲಪಿಲಿ ನಾದ, ಜಿಂಕೆಗಳ ಮಿಂಚಿನ ಓಟದ ಲೈವ್ ದೃಶ್ಯಗಳು ಮನಸ್ಸಿಗೆ ಮುದ ನೀಡುತ್ತವೆ. ಎರಡು ವರ್ಷಗಳಿಂದ ಜನರನ್ನು ಬೆಂಬಿಡದೆ ಕಾಡಿದ ಕೋವಿಡ್ ಸೋಂಕಿನ ಹೊಡೆತಕ್ಕೆ ಸಿಲುಕಿದ್ದ ಭದ್ರಾ ವನ್ಯಜೀವಿ ವಿಭಾಗದ ಸಫಾರಿ ಮತ್ತು ಮತ್ತೋಡಿ ಸಫಾರಿ ಪ್ರವಾಸಿಗರಿಲ್ಲದೆ ಕಳೆಗುಂದಿತ್ತು. ಸದ್ಯ ಕೋವಿಡ್ ಸೋಂಕು ಕ್ಷೀಣಿಸಿದ್ದು, ಸಫಾರಿ ಮತ್ತೆ ಚೇತರಿಸಿಕೊಳ್ಳುತ್ತಿದೆ. ವಾರಾಂತ್ಯದ ದಿನಗಳಲ್ಲಿ ಸಫಾರಿಗೆ ಏರಲು ಪ್ರವಾಸಿಗರ ದಂಡು ಹರಿದು ಬರುತ್ತಿದೆ.
ಬೆಂಗಳೂರು ಸೇರಿದಂತೆ ಇತರ ರಾಜ್ಯಗಳ ಪ್ರವಾಸಿಗರು ಸಫಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬರುತ್ತಿದ್ದು, ವಾರದ ಇತರ ದಿನಗಳಲ್ಲಿ ಸ್ಥಳೀಯರ ಸಂಖ್ಯೆ ಅಧಿಕವಾಗಿರುತ್ತದೆ. 2021ರ ಜನವರಿಯಿಂದ ಡಿಸೆಂಬರ್‌ವರೆಗೂ 20,486 ಭಾರತೀಯ ಪ್ರವಾಸಿಗರು ಮತ್ತು 49 ವಿದೇಶಿ ಪ್ರವಾಸಿಗರು ಸೇರಿದಂತೆ 20,517 ಪ್ರವಾಸಿಗರು ಅಭಯಾರಣ್ಯ ವೀಕ್ಷಣೆ ಮಾಡಿದ್ದಾರೆ.
2021ರಲ್ಲಿ ಮತ್ತೋಡಿ ವನ್ಯಜೀವಿ ವಿಭಾಗಕ್ಕೆ 4,811 ದೇಶೀಯ ಪ್ರವಾಸಿಗರು, ಇಬ್ಬರು ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ ಹಾಗೆಯೇ ಲಕ್ಕವಳ್ಳಿ ವನ್ಯಜೀವಿ ವಿಭಾಗಕ್ಕೆ ದೇಶೀಯ 11,242 ಪ್ರವಾಸಿಗರು, 47 ವಿದೇಶಿಯರು ಪ್ರವಾಸಿಗರು ಭೇಟಿ ನೀಡಿದ್ದರೆ, ತಣಿಗೆಬೈಲು ವನ್ಯಜೀವಿ ವಿಭಾಗಕ್ಕೆ 4,215 ಭಾರತೀಯ ಪ್ರವಾಸಿಗರು ಭೇಟಿ ನೀಡಿದ್ದಾರೆ. 2022ರ ಜನವರಿಯಿಂದ ಮಾರ್ಚ್‌ವರೆಗೂ 39,963 ಭಾರತೀಯ ಪ್ರವಾಸಿಗರು. 16 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದರಲ್ಲಿ ಮುತ್ತೋಡಿ 7,726 ದೇಶಿಯ, ಒಬ್ಬರು ವಿದೇಶಿ ಪ್ರವಾಸಿಗರು, ಲಕ್ಕವಳ್ಳಿ ವಿಭಾಗಕ್ಕೆ 24,555 ದೇಶೀಯ, 15 ವಿದೇಶಿಗರು, ತಣಿಗೆಬೈಲಿಗೆ 7,682 ಪ್ರವಾಸಿಗರು ಸಫಾರಿ ತೆರಳಿ ಅಭಯಾರಣ್ಯದಲ್ಲಿ ಕಾಡುಪ್ರಾಣಿಗಳನ್ನು ಕಂಡು ಸಂಭ್ರಮಿಸಿದ್ದಾರೆ. ಕೋವಿಡ್‌ನಿಂದ ಅಭಯಾರಣ್ಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿತ್ತು. ಸದ್ಯ ಕೋವಿಡ್ ಸೋಂಕು ಕ್ಷೀಣಿಸಿದ್ದು, ಅಭಯಾರಣ್ಯ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಕಳೆಗುಂದಿದ್ದ ಸಫಾರಿ ಸದ್ಯ ಚೇತರಿಸಿಕೊಳ್ಳುತ್ತಿದೆ.
ಪ್ರವಾಸಿಗರಿಗೆ ದರ್ಶನ ನೀಡಿದ ಚಿರತೆ, ಮೊಸಳೆ
ವಾರದ ಹಿಂದೆ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಚಿರತೆ ದರ್ಶನ ನೀಡಿದೆ. ಭದ್ರಾ ಹಿನ್ನೀರಿನಲ್ಲಿ ನೀರಿನ ಹರಿವು ಕಡಿಮೆ ಇರುವುದರಿಂದ ಮೊಸಳೆಯೊಂದು ದಡಕ್ಕೆ ಬಂದು ಪ್ರವಾಸಿಗರಿಗೆ ಅಚ್ಚರಿಯನ್ನುಂಟು ಮಾಡಿದೆ. ಕಣ್ಣು ಹಾಯಿಸಿದಲ್ಲಿ ಕಾಡುಕೋಣಗಳ ದಂಡು. ನವಿಲು, ಜಿಂಕೆ, ಅಪರೂಪದ ನೀರು ನಾಯಿಗಳು ಪ್ರವಾಸಿಗರಿಗೆ ದರ್ಶನ ನೀಡಿದೆ. ಕಾಡುಪ್ರಾಣಿಗಳ ದರ್ಶನಕ್ಕೆ ಡಿಮ್ಯಾಂಡ್ ಹೆಚ್ಚಿದೆ.
ಚಿಣ್ಣರ ವನ ದರ್ಶನ
ಮಕ್ಕಳಿಗೆ ಕಾಡು ಮತ್ತು ವನ್ಯಜೀವಿ ರಕ್ಷಣೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಚಿಣ್ಣರ ವನದರ್ಶನ ಕಾರ್ಯಕ್ರಮ ಆಯೋಜಿಸಿದ್ದು, ಸರಕಾರಿ ಶಾಲೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಇದುವರೆಗೂ 10 ಕ್ಯಾಂಪ್‌ಗಳನ್ನು ನಡೆಸಲಾಗಿದೆ. ಲಕ್ಕವಳ್ಳಿಯಲ್ಲಿ 4, ಮುತ್ತೋಡಿ ಹೆಬ್ಬೆ ಮತ್ತು ತಣಿಗೆಬೈಲಿನಲ್ಲಿ ತಲಾ 2 ಶಿಬಿರಗಳನ್ನು ನಡೆಸಲಾಗಿದೆ. ಅರಣ್ಯದಲ್ಲಿನ ಸಸ್ಯಪ್ರಭೇದ ಹಾಗೂ ವನ್ಯಜೀವಿಗಳ ಬಗ್ಗೆ ಅರಿವು ನೀಡಲಾಗುತ್ತದೆ. ಭದ್ರಾ ವನ್ಯಜೀವಿ ವಿಭಾಗದ ಮುತ್ತೋಡಿ ಮತ್ತು ಲಕ್ಕವಳ್ಳಿಯಲ್ಲಿ ವನ್ಯಜೀವಿ ಮತ್ತು ಪಕ್ಷಿ ಸಂಕುಲಗಳ ವೀಕ್ಷಣೆಗೆ ಸಫಾರಿ ವ್ಯವಸ್ಥೆ ಕಲ್ಪಿಸಲಾಗಿದೆ. ಮತ್ತೋಡಿ 3ಜೀಪು ಮತ್ತು 1 ಬಸ್, ಲಕ್ಕವಳ್ಳಿಯಲ್ಲಿ 2 ಜೀಪು ಮತ್ತು 1 ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಜೀಪ್‌ನಲ್ಲಿ 8 ಜನರು ಮತ್ತು ಬಸ್‌ನಲ್ಲಿ 25 ಜನರು ಕಾಡಿನೊಳಗೆ ತೆರಳಿ ಕಾಡುಪ್ರಾಣಿಗಳನ್ನು ವೀಕ್ಷಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಮತ್ತೋಡಿಯಲ್ಲಿ 39 ಕಿ.ಮೀ. ಮತ್ತು ಲಕ್ಕವಳ್ಳಿಯಲ್ಲಿ 36 ಕಿ.ಮೀ. ಸಫಾರಿ ಮಾಡಬಹುದಾಗಿದೆ. ಕಾಡುಪ್ರಾಣಿಗಳ ಸಂಚಾರಕ್ಕೆ ಧಕ್ಕೆಯಾಗದಂತೆ ಸಫಾರಿ ವ್ಯವಸ್ಥೆ ಕಲ್ಪಿಸಲಾಗಿದೆ.