ಧರ್ಮಗಳನ್ನು ಪ್ರೀತಿಸುವ, ಗೌರವಿಸುವ ಸಹಿಷ್ಣುತೆ ಅವಶ್ಯ: ಸಿದ್ದರಾಮಯ್ಯ

Update: 2022-05-09 12:04 GMT

ಬೆಂಗಳೂರು, ಮೇ 9: ಈ ದೇಶದಲ್ಲಿ ಎಲ್ಲ ಧರ್ಮಗಳನ್ನು ಪ್ರೀತಿಸುವ, ಗೌರವಿಸುವ ಸಹಿಷ್ಣುತೆ ಇರಬೇಕು. ಇದನ್ನು ನಿರ್ಮಾಣ ಮಾಡಬೇಕಿರುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸೋಮವಾರ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಮಹಾ ಸಂಸ್ಥಾನ ಟ್ರಸ್ಟ್, ರಾಜ್ಯ ದೇವಾಂಗ ಸಂಘ ಆಯೋಜಿಸಿದ್ದ ಶ್ರೀದಯಾನಂದಪುರಿ ಶ್ರೀಗಳ 33ನೆ ಪೀಠಾರೋಹಣ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂವಿಧಾನದ ಆಶಯದಂತೆ ಸಮ ಸಮಾಜ ನಿರ್ಮಾಣವಾಗುವ ಅವಶ್ಯಕತೆ ಇದೆ ಎಂದರು.

ಕಾಯಿಲೆ ಬಿದ್ದಾಗ ಯಾರ ರಕ್ತ ಆದರೂ ಕೊಡಿ ಬದುಕಿದರೆ ಸಾಕು ಎಂದು ಪಡೆದು, ಬದುಕಿದ ಮೇಲೆ ಜಾತಿ, ಧರ್ಮ ಎಂದು ಸ್ವಾರ್ಥಿಗಳಾದರೆ ಹೇಗೆ? ಸಮಾಜಕ್ಕಾಗಿ ಬದುಕುವ ಸ್ವಾಮೀಜಿಗಳನ್ನು ನಾವು ಇದೇ ಕಾರಣಕ್ಕೆ ಗೌರವಿಸುವುದು. ಅವರದು ನಿಸ್ವಾರ್ಥ ಬದುಕು ಎಂದರು.

ಶ್ರೀದಯಾನಂದಪುರಿ ಶ್ರೀಗಳು ಪೀಠಾಧ್ಯಕ್ಷರಾದ ನಂತರ ಕಳೆದ 32 ವರ್ಷಗಳಿಂದ ದೇವಾಂಗ ಸಮಾಜದ ಅಭಿವೃದ್ಧಿಗೆ ನಿರಂತರ ಕೆಲಸ ಮಾಡಿದ್ದಾರೆ. ಶ್ರೀಗಳು ಅತ್ಯಂತ ಸರಳ ಸ್ವಭಾವದವರು. ಸಮಾಜದ ಬಗೆಗೆ ಅಪಾರ ಕಾಳಜಿ ಹೊಂದಿದ್ದಾರೆ ಎಂದರು.

ಈಗ ದೇವಾಂಗ ಸಮಾಜದ ಯಾರೊಬ್ಬರು ಸಂಸದರಿಲ್ಲ, ಮಂತ್ರಿ ಇಲ್ಲ. ನಾವು ಅಧಿಕಾರದಲ್ಲಿ ಇದ್ದಾಗ ಅಧಿಕಾರ ವಂಚಿತ ಜಾತಿಗಳನ್ನು ಗುರುತಿಸಿ, ಅವರಿಗೆ ಅಧಿಕಾರ ನೀಡುವ ಕೆಲಸ ಮಾಡಿದ್ದೆವು. ಚಾಮರಾಜನಗರದಿಂದ ಪುಟ್ಟರಂಗಶೆಟ್ಟಿ ಅವರನ್ನು ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಿ ಮಂತ್ರಿ ಮಾಡಿದ್ದೆವು. ಜಾತಿ ವ್ಯವಸ್ಥೆ ಇರುವವರೆಗೆ ಮೀಸಲಾತಿ ಇರಬೇಕು ಎಂದು ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದರು. ಇದೇ ಕಾರಣಕ್ಕೆ ಸಂವಿಧಾನಕ್ಕೆ 73 ಮತ್ತು 74 ನೆ ತಿದ್ದುಪಡಿ ಮಾಡಿ ಹಿಂದುಳಿದ ಜಾತಿ, ವರ್ಗ, ಅಲ್ಪಸಂಖ್ಯಾತರು, ಮಹಿಳೆಯರಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮೀಸಲಾತಿ ಸೌಲಭ್ಯ ಸಿಗುವಂತೆ ಮಾಡಲಾಯಿತು. ಅದು ಜಾರಿಗೆ ಬರಲು ನಮ್ಮ ಸಮಿತಿ ಕಾರಣ. ಸುಪ್ರೀಂ ಕೋರ್ಟ್ ಈ ಶೇ.23ರಷ್ಟು ಮೀಸಲಾತಿಯನ್ನು ತೆಗೆದು ಹಾಕಿದೆ ಎಂದರು.

ಕೊರೋನ ಕಾಲದಲ್ಲಿ ನೇಕಾರರು, ರಿಕ್ಷಾ ಚಾಲಕರು, ಸವಿತಾ ಸಮಾಜದವರು, ಚಾಲಕರು ಮುಂತಾದ ಜನ ಕಷ್ಟದಲ್ಲಿದ್ದಾರೆ, ಅವರಿಗೆ ತಲಾ ಹತ್ತು ಸಾವಿರ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಹೇಳಿದೆ. ಆದರೆ ಅವರು ನನ್ನ ಮನವಿಯನ್ನು ಪುರಸ್ಕರಿಸಿಲ್ಲ. ಕೊರೋನ ಲಾಕ್‍ಡೌನ್ ವೇಳೆ ಅಗತ್ಯ ವಸ್ತುಗಳ ಬೆಲೆ, ಕಚ್ಚಾ ಸಾಮಗ್ರಿ ಬೆಲೆ ಜಾಸ್ತಿಯಾಗಿ, ಉದ್ಯೋಗ ಇಲ್ಲದೆ 36 ಜನ ನೇಕಾರರು ಆತ್ಮಹತ್ಯೆಗೆ ಶರಣಾದರು. ಬಹಳ ನೋವಿನ ವಿಚಾರವಿದು. ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ. ನಿಮ್ಮ ಸ್ವಾಭಿಮಾನವನ್ನು ಎತ್ತಿ ಹಿಡಿದು, ನಿಮ್ಮ ಬದುಕಿಗೆ ಘನತೆ ತಂದು ಕೊಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಸಮಾವೇಶ ಅನಿವಾರ್ಯ

ಜಾತಿ ವ್ಯವಸ್ಥೆ ಇರುವವರೆಗೆ ಅವಕಾಶಗಳಿಂದ ವಂಚಿತವಾದ ಜಾತಿಗಳು, ಶೋಷಿತ ಜಾತಿಗಳು ತಮ್ಮ ಹಕ್ಕುಗಳಿಗಾಗಿ ಸಮಾವೇಶವನ್ನು ಮಾಡುವುದು ಅನಿವಾರ್ಯ ಮತ್ತು ನ್ಯಾಯಯುತವಾದುದ್ದು. ಶೋಷಿತ ಜನರು ನಡೆಸುವ ಜಾತಿ ಸಮಾವೇಶಗಳು ಜಾತೀವಾದವಲ್ಲ ಎಂದು ಲೋಹಿಯಾ ಹೇಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News