ದುಡ್ಡಿದ್ದವರಿಗೆ ಮಾತ್ರ ಜೆಡಿಎಸ್‍ನಲ್ಲಿ ಟಿಕೆಟ್: ವರಿಷ್ಠರ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಅಸಮಾಧಾನ

Update: 2022-05-09 14:33 GMT
ಬೆಂಬಲಿಗರ ಸಭೆಯಲ್ಲಿ ಮರಿತಿಬ್ಬೇಗೌಡ 

ಮಂಡ್ಯ, ಮೇ 9: .ಜೆಡಿಎಸ್‍ನಲ್ಲಿ ಅಭ್ಯರ್ಥಿಯಾಗಲು ಹಣವೇ ಮುಖ್ಯ ಹೊರತು ಅಭ್ಯರ್ಥಿಯಲ್ಲ. ಎಂದು ಹೇಳುವ ಮೂಲಕ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಜೆಡಿಎಸ್ ವರಿಷ್ಠರ ವಿರುದ್ಧ ಬಹಿರಂಗವಾಗಿಯೇ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ನಗರದಲ್ಲಿ ರವಿವಾರ ಸಂಜೆ ನಡೆದ ದಕ್ಷಿಣ ಪದವೀಧರರ ಚುನಾವಣೆಯ ಜೆಡಿಎಸ್ ಟಿಕೆಟ್ ಆಕಾಂಕ್ಷಿತ ಕೀಲಾರ ಜಯರಾಮು ಬೆಂಬಲಿಗರ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವೇಗೌಡ, ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕೀಲಾರ ಜಯರಾಮು ಅವರ ಹತ್ತಿರ ಹಣವಿಲ್ಲದ ಕಾರಣ ಟಿಕೆಟ್ ಕೊಡುತ್ತಿಲ್ಲವೆಂದು ದೇವೇಗೌಡ ಮತ್ತು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಅಂದರೆ, ಹಣವಿದ್ದವರಿಗೆ ಮಾತ್ರ ಜೆಡಿಎಸ್‍ನಲ್ಲಿ ಟಿಕೆಟ್ ದೊರೆಯುತ್ತದೆ ಎಂದು ಅವರು ಕಿಡಿಕಾರಿದರು.

ಕೀಲಾರ ಜಯರಾಮು ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಅವರ ಗೆಲವಿಗೆ ಹಣ ಮುಖ್ಯವಾಗಿರಲಿಲ್ಲ, ನಾವೇ ಗೆಲ್ಲಿಸಿಕೊಂಡು ಬರುತ್ತಿದ್ದೆವು. ಆದರೆ, ಜೆಡಿಎಸ್ ವರಿಷ್ಠರು ಮೊದಲು ಭರವಸೆ ನೀಡಿ ಈಗ ಬೇರೆಯವರಿಗೆ ಟಿಕೆಟ್ ಘೋಷಿಸಿದ್ದಾರೆ ಎಂದು ಅವರು ಹೇಳಿದರು.

ಎಚ್.ಕೆ.ರಾಮು ಪಕ್ಷದ ಸದಸ್ಯರೇ ಅಲ್ಲ. ಯಾವತ್ತೂ ಪಕ್ಷದ ಬಾವುಟ ಕಟ್ಟಲಿಲ್ಲ. ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿಲ್ಲ. ಹೀಗಿದ್ದರೂ ಯಾವ ಮಾನದಂಡದಿಂದ ಅವರಿಗೆ ಟಿಕೆಟ್ ಘೋಷಿಸಲಾಗಿದೆ ಎಂದು ಅವರು ಪ್ರಶ್ನಿಸಿದರು.

ಯಾವುದೇ ಕಾರಣಕ್ಕೂ ಎಚ್.ಕೆ.ರಾಮು ಪರವಾಗಿ ನಾವು ಪ್ರಚಾರ ಮಾಡುವುದಿಲ್ಲ. ಕಾರ್ಯಕರ್ತರು, ಬೆಂಬಲಿಗರು ಮತ್ತು ಹಿತೈಷಿಗಳ ಅಭಿಪ್ರಾಯ ಪಡೆದು ಮುಂದಿನ ನಡೆ ತೀರ್ಮಾನಿಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.

ಮುಖಂಡ ಕೀಲಾರ ಜಯರಾಮು ಮಾತನಾಡಿ, ಈಶ್ವರನಾಣೆ ನಿನಗೇ ಟಿಕೆಟ್ ಕೊಡುವುದಾಗಿ ದೇವೇಗೌಡರು ಭರವಸೆ ನೀಡಿದ್ದರು. ಆದರೆ, ಹಣವಿಲ್ಲವೆಂದು ನಿರಾಕರಿಸಿ ರಾಮು ಅವರಿಗೆ ನೀಡಿದ್ದಾರೆ. ನಾವು ರಾಮು ಅವರನ್ನು ಬೆಂಬಲಿಸುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News