ರಸಗೊಬ್ಬರ ದಂಧೆ ಹಿಂದೆ ಸಚಿವ ಬಿ.ಸಿ.ಪಾಟೀಲ್: ಆಪ್ ಆರೋಪ

Update: 2022-05-09 15:19 GMT
ಡಾ.ವಿಶ್ವನಾಥ್ 

ತುಮಕೂರು.ಮೇ.09:ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿಸಿ ನೆರೆರಾಜ್ಯಗಳಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿರುವ ದಂಧೆಗೆ ಸಂಬಂಧಿಸಿ ಕೃಷಿ ಸಚಿವ ಬಿ.ಸಿ.ಪಾಟೀಲ್ ವಿರುದ್ಧ ನ್ಯಾಯಾಂಗ ತನಿಖೆ ನಡೆಯಬೇಕೆಂದು ಆಮ್ ಆದ್ಮಿ ಪಾರ್ಟಿಯ ತುಮಕೂರು ಜಿಲ್ಲಾ ಉಸ್ತುವಾರಿ ಡಾ.ವಿಶ್ವನಾಥ್ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸರಕಾರವು ಸಬ್ಸಿಡಿ ದರದಲ್ಲಿ ನೀಡುವ ಬೇವು ಲೇಪಿತ ಯೂರಿಯಾವನ್ನು ಸುಳ್ಳು ದಾಖಲೆ ನೀಡಿ ರೈತರ ಹೆಸರಿನಲ್ಲಿ ಸಚಿವರು ಮತ್ತು ಅವರ ಹಿಂಬಾಲಕರು ಖರೀದಿಸಿ, ಅಕ್ರಮವಾಗಿ ದಾಸ್ತಾನು ಮಾಡಿ, ಹೆಚ್ಚಿನ ಬೆಲೆ ಹೊರರಾಜ್ಯಗಳಲ್ಲಿ ಮಾರಾಟ ಮಾಡುವ ಮೂಲಕ ಬಾರಿ ಅವ್ಯವಹಾರದಲ್ಲಿ ತೊಡಗಿದ್ದಾರೆ.ಇದರಿಂದಾಗಿ ರೈತರಿಗೆ ಬೇವು ಮಿಶ್ರಿತ ರಸಗೊಬ್ಗರದ ಅಭಾವ ಉಂಟಾಗಿದೆ ಎಂದು ದೂರಿದ್ದಾರೆ.

ರಸಗೊಬ್ಬರ ದಂಧೆಯು ಅವ್ಯಾಹತವಾಗಿ ನಡೆಯುತ್ತಿದ್ದರೂ ರಾಜ್ಯ ಸರಕಾರ ಇದುವರೆಗೂ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸಿಲ್ಲ. ಗೊತ್ತಿದ್ದು, ಒಂದು ರೀತಿಯ ಜಾಣಕುರುಡು ಪ್ರದರ್ಶಿಸುತ್ತಿದೆ ಎಂದು ಟೀಕಿಸಿರುವ ಡಾ.ವಿಶ್ವನಾಥ್,ರಸಗೊಬ್ಬರ ಹಗರಣದಲ್ಲಿ ಭಾಗಿಯಾಗಿರುವ ಸಚಿವ ಬಿ.ಸಿ.ಪಾಟೀಲ್‍ರನ್ನು ರಕ್ಷಿಸುವ ಬದಲು ಅವರ ವಿರುದ್ದ ಉನ್ನತ ಮಟ್ಟದ, ಇಲ್ಲವೇ ಹೈಕೋರ್ಟಿನ ನ್ಯಾಯಾಧೀಶರ ಮೂಲಕ ತನಿಖೆ ನಡೆಸಿ, ಪ್ರಕರಣವನ್ನು ಬಯಲಿಗೆಳೆಯುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ.

ಕರ್ನಾಟಕದ ರೈತರಿಗೆ ಸಬ್ಸಿಡಿ ದರದಲ್ಲಿ ಸಿಗಬೇಕಾದ ರಸಗೊಬ್ಬರವು ನೆರೆರಾಜ್ಯಗಳು ಮಾತ್ರವಲ್ಲದೇ ನೇಪಾಳ ಹಾಗೂ ಬಾಂಗ್ಲಾದೇಶಕ್ಕೂ ಅಕ್ರಮವಾಗಿ ಮಾರಾಟವಾಗುತ್ತಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.ಸಚಿವರ ಕೈವಾಡವಿಲ್ಲದೇ ಇಷ್ಟು ದೊಡ್ಡಮಟ್ಟದ ಅಕ್ರಮ ನಡೆಯಲು ಸಾಧ್ಯವೇ ಇಲ್ಲ. ರಸಗೊಬ್ಬರ ಕಳ್ಳಸಾಗಣೆ ಮಾಡುವವರಿಂದ ರಾಜ್ಯ ಬಿಜೆಪಿ ಸರಕಾರವು ಎಷ್ಟು ಕಮಿಷನ್ ಪಡೆಯುತ್ತಿದೆ ಎಂಬುದು ಜನರಿಗೆ ತಿಳಿಯಬೇಕಾದರೆ ನ್ಯಾಯಾಂಗ ತನಿಖೆಯೇ ಆಗಬೇಕು ಎಂದು ಸರಕಾರವನ್ನು ಎಎಪಿ ತುಮಕೂರು ಜಿಲ್ಲಾ ಉಸ್ತುವಾರಿ ಡಾ.ವಿಶ್ವನಾಥ್ ಅಗ್ರಹಿಸಿದ್ದಾರೆ.

ಈಗಾಗಲೇ ಲೋಕೋಪಯೋಗಿ ಟೆಂಡರ್,ಪಿ.ಎಸ್.ಐ ಪರೀಕ್ಷೆ ಹಗರಣ,ಉಪನ್ಯಾಸಕರ ನೇಮಕದಲ್ಲಿ ಅಕ್ರಮ ಸೇರಿದಂತೆ ಹಲವಾರು ಅಕ್ರಮಗಳಲ್ಲಿ ಪಕ್ಷ ಭಾಗಿಯಾಗಿದ್ದು, ದಿನಕ್ಕೊಂದು ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದರ ಜೊತೆಗೆ ರಸಗೊಬ್ಬರದ ಹಗರಣವೂ ಸಹ ಬಿಜೆಪಿ ಪಕ್ಷವನ್ನು ಸುತ್ತಿಕೊಂಡಿದೆ.ನಾ ಕಾವೋಂಗ, ನಾ ಕಾನೆದೊಂಗ ಎಂದು ಹೇಳುತಿದ್ದ ಪ್ರಧಾನಿ ಮೋದಿ ಅವರು, ಸಾಲ ಹಗರಣಗಳಲ್ಲಿ ಭಾಗಿಯಾಗಿರುವ ಕರ್ನಾಟಕದ ಎಸ್.ಆರ್.ಬೊಮ್ಮಾಯಿ ನೇತೃತ್ವದ ಸರಕಾರವನ್ನು ವಜಾಗೊಳಿಸಬೇಕೆಂದು ಡಾ.ವಿಶ್ವನಾಥ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News