ಬಂಗಾಲಕೊಲ್ಲಿಯಲ್ಲಿ ಸುಳಿಗಾಳಿ: ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆ ಸಾಧ್ಯತೆ
ಬೆಂಗಳೂರು, ಮೇ 9: ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನೂ 5 ದಿನ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಹಾಗೂ ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ. ರಾಜ್ಯದಾದ್ಯಂತ ಅಲ್ಲಲ್ಲಿ ಮಿಂಚಿನೊಂದಿಗೆ ಗುಡುಗು ಸಂಭವಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಮತ್ತು ನಾಳೆ ಮಳೆ ಇರಲಿದ್ದು, ಮಂಗಳವಾರ ಹಗಲಿನ ವೇಳೆ ಮೋಡ ಕವಿದ ವಾತಾವರಣ ಇರಲಿದೆ. ಕೆಲವೆಡೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞ ಪ್ರಸಾದ್ ಮುನ್ಸೂಚನೆ ನೀಡಿದ್ದಾರೆ.
ರವಿವಾರ ರಾತ್ರಿ ಬಸವನಗುಡಿ, ಚಾಮರಾಜಪೇಟೆ, ಎಂಜಿ ರಸ್ತೆ, ಕೋರಮಂಗಲ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಬೇಗೂರು, ಜಯನಗರ, ಜೆಪಿ ನಗರ, ರಾಜಾಜಿನಗರ, ಮಲ್ಲೇಶ್ವರಂ ಮುಂತಾದೆಡೆ ವಿಪರೀತ ಮಳೆಯಾಗುತ್ತಿದ್ದು, ಹಲವೆಡೆ ಮರಗಳು ಉರುಳಿವೆ.