ವಿವಿಧ ಸಕ್ಕರೆ ಕಾರ್ಖಾನೆಗಳು 6 ಸಾವಿರ ಕೋಟಿಗೂ ಹೆಚ್ಚು ಬಾಕಿ ಉಳಿಸಿಕೊಂಡಿವೆ: ಸಚಿವ ಎಸ್. ಟಿ ಸೋಮಶೇಖರ್
ಬೆಳಗಾವಿ: 'ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳು 6 ಸಾವಿರ ಕೋಟಿಗೂ ಹೆಚ್ಚು ಬಾಕಿ ಉಳಿಸಿಕೊಂಡಿವೆ' ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪೆಕ್ಸ್ ಬ್ಯಾಂಕಿನಿಂದ ಶಾಸಕ ರಮೇಶ್ ಜಾರಕಿಹೊಳಿ ಅವರ ಸೌಭಾಗ್ಯಲಕ್ಷಿ ಸಕ್ಕರೆ ಕಾರ್ಖಾನೆಯಿಂದ ಮಾತ್ರ ಅಲ್ಲ, ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಜೆಡಿಎಸ್ ಶಾಸಕ ಬಂಡೆಪ್ಪ ಕಾಂಶಪೂರ ಮೊದಲಾದವರು ಕೂಡ ಹಣ ಬಾಕಿ ಉಳಿಸಿಕೊಂಡಿದ್ದಾರೆ. ಸುಮಾರು 24 ಜನ ಅಪೆಕ್ಸ್ ಬ್ಯಾಂಕಿನಿಂದ 6 ಸಾವಿರ ಕೋಟಿ ವರೆಗೆ ಸಾಲ ಪಡೆದಿದ್ದಾರೆ. ಯಾವೆಲ್ಲ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿವೆಯೋ ಅವುಗಳಿಗೆ ಸಂಬಂಧಿಸಿದವರೆಲ್ಲರಿಗೂ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
'ಕೆಲವರು ಬಡ್ಡಿ ಹಾಗೂ ಅಸಲು ಎರಡನ್ನೂ ಕಟ್ಟಿಲ್ಲ. ಕೆಲವರು ಬಡ್ಡಿಯನ್ನು ನಿಯಮಿತವಾಗಿ ಪಾವತಿಸುತ್ತಿದ್ದಾರೆ. ದಕ್ಷಿಣ ಕನ್ನಡ, ತುಮಕೂರು ಮೊದಲಾದ ಡಿಸಿಸಿ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದಾರೆ. ವಸೂಲಿ ಮಾಡಲು ಗಂಭೀರವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾರದು ಎಷ್ಟು ಕೋಟಿ ರೂಪಾಯಿ ಬಾಕಿ ಇದೆ ಎನ್ನುವುದನ್ನು ಕೂಡ ಸಾರ್ವಜನಿಕ ವೇದಿಕೆಯಲ್ಲಿ ಪ್ರಕಟಿಸಲಾಗುವುದು. ಇದರಲ್ಲಿ ರಾಜಕೀಯವೇನಿಲ್ಲ, ಮುಚ್ಚು ಮರೆಯೂ ಇಲ್ಲ' ಎಂದು ಪ್ರತಿಕ್ರಿಯಿಸಿದರು.