ಧ್ವನಿವರ್ಧಕಗಳ ಬಳಕೆಗೆ ಲಿಖಿತ ಅನುಮತಿ ಕಡ್ಡಾಯಗೊಳಿಸಿದ ರಾಜ್ಯ ಸರಕಾರ; ಆದೇಶ ತಕ್ಷಣ ಜಾರಿ
ಬೆಂಗಳೂರು: ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆ ಬಗ್ಗೆ ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ಇಂದು ಗೃಹ, ಪೊಲೀಸ್, ಕಾನೂನು ಇಲಾಖೆಗಳ ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸುಪ್ರೀಂ ಕೋರ್ಟಿನ 2005 ನಿರ್ದೇಶಾನುಸಾರ ಶಬ್ದ ಮಾಲಿನ್ಯ (ನಿಯಂತ್ರಣ) ನಿಯಮಗಳು, 2000 ಹಾಗೂ ಈ ಕುರಿತು ಕರ್ನಾಟಕ ಸರಕಾರ 13.8.2002ರಂದು ಹೊರಡಿಸಿದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆದೇಶಿಸಿದ್ದಾರೆ.
ಎಲ್ಲಾ ಧ್ವನಿವರ್ಧಕಗಳು ಹಾಗೂ ಮೈಕುಗಳ ಬಳಕೆಗೆ ಸಂಬಂಧಿತ ಪ್ರಾಧಿಕಾರಗಳಿಂದ 15 ದಿನಗಳೊಳಗಾಗಿ ಲಿಖಿತ ಅನುಮತಿ ಪಡೆಯಬೇಕು ಎಂದು ಅವರು ಸೂಚಿಸಿದ್ದಾರೆ.
ಅನುಮತಿ ಪಡೆಯಲು ವಿಫಲರಾದವರು ಸ್ವಯಂಪ್ರೇರಣೆಯಿಂದ ಧ್ವನಿವರ್ಧಕಗಳನ್ನು ತೆಗೆಯಬೇಕು ಇಲ್ಲದೇ ಹೋದಲ್ಲಿ ಅವುಗಳನ್ನು ಸಂಬಂಧಿತ ಪ್ರಾಧಿಕಾರಗಳು ತೆರವುಗೊಳಿಸುತ್ತವೆ.
ಎಲ್ಲಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಹಾಯಕ ಪೊಲೀಸ್ ಆಯುಕ್ತರು, ಆಯಾ ನಗರಪಾಲಿಕೆ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿಧಿಯೊಬ್ಬರಿರುವ ಸಮಿತಿ ಅನುಮತಿಗಳ ಕುರಿತು ನಿರ್ಧರಿಸಲಿದೆ.
ಉಳಿದ ಪ್ರದೇಶಗಳಲ್ಲಿ ಡಿವೈಎಸ್ಪಿ, ತಹಸೀಲ್ದಾರ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿಧಿಯೊಬ್ಬರಿರುವ ಸಮಿತಿ ಅನುಮತಿಗಳನ್ನು ನೀಡುವ ಬಗ್ಗೆ ನಿರ್ಧರಿಸಲಿದೆ.
ಈ ಆದೇಶ ತಕ್ಷಣಕ್ಕೆ ಜಾರಿಗೆ ಬರಲಿದ್ದು ಧ್ವನಿವರ್ಧಕಗಳು, ಮೈಕ್‍ಗಳ ಬಳಸುವ ಎಲ್ಲಾ ಸ್ಥಳಗಳಿಗೂ ಅನ್ವಯವಾಗುತ್ತದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಶಬ್ದ ಮಾಲಿನ್ಯ (ನಿಯಂತ್ರಣ) ನಿಯಮಗಳು, 2000 ಪ್ರಕಾರ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆ ತನಕ ಧ್ವನಿವರ್ಧಕಗಳ ಬಳಕೆಗೆ ಅನುಮತಿಯಿಲ್ಲ ಆದರೆ ಮುಚ್ಚಿದ ಸ್ಥಳಗಳಲ್ಲಿ ಅಲ್ಲಿ ಮಾತ್ರ ಕೇಳುವ ಹಾಗೆ ಬಳಸಬಹುದಾಗಿದೆ. ಆದರೆ ಹಗಲು ಅಥವಾ ರಾತ್ರಿ ಹೊತ್ತು ಧ್ವನಿವರ್ಧಕಗಳ ಬಳಕೆಗೆ ಅನುಮತಿ ಮಾತ್ರ ಕಡ್ಡಾಯವಾಗಿದೆ.