ಮೇ 16ರಿಂದ ಕಲಿಕಾ ಚೇತರಿಕೆಯೊಂದಿಗೆ ಶಾಲೆಗಳು ಆರಂಭ: ಸಚಿವ ಬಿ.ಸಿ ನಾಗೇಶ್

Update: 2022-05-10 14:27 GMT

ಬೆಂಗಳೂರು, ಮೇ 10: ರಾಜ್ಯದಲ್ಲಿ ಮೇ 16ರಿಂದ ‘ಕಲಿಕಾ ಚೇತರಿಕೆ’ಯೊಂದಿಗೆ ಶಾಲೆಗಳು ಆರಂಭವಾಗಲಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು  ಸಚಿವ ಬಿ.ಸಿ ನಾಗೇಶ್ ಅವರು ತಿಳಿಸಿದರು. 

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಕಾರಣ 2 ವರ್ಷಗಳಿಂದ ಉಂಟಾಗಿರುವ ಕಲಿಕಾ ಹಿನ್ನಡೆಯನ್ನು ಸರಿದೂಗಿಸಲು ರಾಜ್ಯ ಸರಕಾರ ಹಮ್ಮಿಕೊಂಡಿರುವ ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇತರ ರಾಜ್ಯಗಳಿಗೂ ಕರ್ನಾಟಕದ ಯೋಜನೆ ಮಾದರಿಯಾಗಿದೆ. ಕಲಿಕಾ ಚೇತರಿಕೆ ಯೋಜನೆಯು ವರ್ಷವಿಡೀ ನಡೆಯಲಿದೆ. ಈ ಹಿನ್ನೆಲೆಯಲ್ಲಿ 2022-23ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷವೆಂದು ಘೋಷಿಸಲಾಗಿದೆ ಎಂದು ತಿಳಿಸಿದರು.

ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಅನುಷ್ಠಾನಗೊಳಿಸಲು ಅಗತ್ಯವಾದ ಸಂಪನ್ಮೂಲಗಳನ್ನು (ವಿದ್ಯಾರ್ಥಿಗಳಿಗೆ ಕಲಿಕಾ ಹಾಳೆ ಮತ್ತು ಶಿಕ್ಷಕರ ಕೈಪಿಡಿ) ಶಿಕ್ಷಣ ಇಲಾಖೆಯ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಲಾಗುತ್ತದೆ. ಅಲ್ಲದೇ, ಶಿಕ್ಷಣ ಸಂಸ್ಥೆಗಳು ಬಯಸಿದರೆ ಅಗತ್ಯ ತರಬೇತಿಯನ್ನು ನೀಡಲು ಶಿಕ್ಷಣ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುತ್ತದೆ' ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News