×
Ad

ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆ ಸಾಧ್ಯತೆ: ಹವಾಮಾನ ಇಲಾಖೆಯಿಂದ ಮುನ್ಸೂಚನೆ

Update: 2022-05-10 22:03 IST

ಬೆಂಗಳೂರು, ಮೇ 10: ಅಸಾನಿ ಚಂಡಮಾರುತದ ಪರಿಣಾಮಬೆಂಗಳೂರು ನಗರ ಸೇರಿ  ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆ, ಮೇ 13ರವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.   

ಮಂಗಳವಾರವೂ ಹಲವೆಡೆ ಭರ್ಜರಿ ಮಳೆಯಾಗಿದ್ದು, ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಚಳಿಯ ಜತೆಗೆ ಮಳೆಯೂ ಸುರಿದಿದ್ದು, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಉಂಟಾಯಿತು. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಅದೇ ರೀತಿಯಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸುರಿದಿದೆ. ಇದರಿಂದಾಗಿ, ಬೆಳೆ ಸೇರಿ ವಿವಿಧ ಆಸ್ತಿಗಳಿಗೆ ಹಾನಿ ಉಂಟಾಗಿದೆ.

ಬೆಂಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರದಲ್ಲಿ ಮೇ 13ರವರೆಗೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ. 

ಭಾರೀ ಗಾಳಿ-ಮಳೆಗೆ ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳಲ್ಲಿಸೋಮವಾರ, ಮಂಗಳವಾರ ವಿದ್ಯುತ್ ವ್ಯತ್ಯಯ ಉಂಟಾಗಿದೆ. ವಿದ್ಯುತ್ ತಂತಿಗಳ ಮೇಲೆ ಭಾರೀ ಗಾತ್ರದ ಮರ ಹಾಗೂ ಕೊಂಬೆಗಳು ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ಬೆಸ್ಕಾಂ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಗಾಳಿ ಮಳೆಗೆ ನೂರಾರು ವಿದ್ಯುತ್ ಕಂಬಗಳು, ಟಿಸಿ, ಅಲ್ಲದೆ, ಮರಗಳು ವಿದ್ಯುತ್ ತಂತಿಗಳ ಮೇಲೆರಗಿವೆ. ಬೆಂಗಳೂರು ನಗರ ಪ್ರದೇಶದ ಕೆಂಗೇರಿ, ಬಂಡೇಮಠ, ಎಚ್‍ಎಸ್‍ಆರ್ ಬಡಾವಣೆ ಮೊದಲಾದೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ರೈತರಲ್ಲಿ ಸಂತಸ ಮೂಡಿಸಿದ ಮಳೆ: ರಾಜ್ಯಾದ್ಯಂತ ಎರಡು ದಿನದಿಂದ ಸುರಿದ ಉತ್ತಮ ಮಳೆಯಿಂದಾಗಿ ರೈತರಲ್ಲಿಮೊಗದಲ್ಲಿ ಸಂತಸ ಮನೆಮಾಡಿದೆ. ಬಿರುಬಿಸಿಲಿನ ತಾಪಕ್ಕೆ ಜನ, ರಾಸುಗಳು ಕಂಗೆಟ್ಟಿದ್ದವು. ನಿರಂತರ ಮಳೆಯಿಂದಾಗಿ ತಂಪಾದ ವಾತಾವರಣ ಮೂಡಿದೆ. ರೈತರು ವ್ಯವಸಾಯ ಕೆಲಸದಲ್ಲಿತೊಡಗಿಸಿಕೊಂಡಿದ್ದಾರೆ. ಜಮೀನು ಸಿದ್ಧತೆ ಮಾಡಿಕೊಂಡು, ಮುಂಗಾರಿನ ಪ್ರಥಮ ಬೆಳೆ ಎಳ್ಳನ್ನು ಬಿತ್ತಲು ಅಣಿಯಾಗಿದ್ದಾರೆ.

ಬೇಸಿಗೆ ಹೆಚ್ಚಾಗಿದ್ದರಿಂದ ನೀರಾವರಿ ವ್ಯವಸಾಯ ಮಾಡಲು ತೊಂದರೆಯಾಗುತ್ತಿತ್ತು. ರೇಷ್ಮೆ ತೋಟಗಳಿಗೆ ಹಾಗೂ ತರಕಾರಿ ಬೆಳೆಗಷ್ಟೇ ಅಲ್ಲ, ಜಾನುವಾರುಗೆ ಮೇವುಗೂ ಅಭಾವ ಹೆಚ್ಚಾಗಿತ್ತು. ಆದರೆ ಸತತ ಮಳೆಯಿಂದ ಈ ಎಲ್ಲಸಮಸ್ಯೆಗೆ ಪರಿಹಾರ ದೊರೆತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News