×
Ad

ಮೈಸೂರು ಪ್ರವಾಸಿ ತಾಣಗಳಿಗೆ ದಾಖಲೆ ಸಂಖ್ಯೆಯ ಪ್ರವಾಸಿಗರು ಭೇಟಿ

Update: 2022-05-11 08:07 IST

ಮೈಸೂರು: ವಿನಾಶದ ಅಂಚಿನಲ್ಲಿರುವ ಪ್ರಾಣಿ ಪಕ್ಷಿಗಳು ಅಧಿಕ ಸಂಖ್ಯೆಯಲ್ಲಿರುವ, 130 ವರ್ಷ ಹಳೆಯ ಮೈಸೂರು ಮೃಗಾಲಯಕ್ಕೆ ಕಳೆದ ರವಿವಾರ ದಾಖಲೆ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಆರಂಭದ ಬಳಿಕ ಇದೇ ಮೊದಲ ಬಾರಿಗೆ ಮೃಗಾಲಯಕ್ಕೆ ಸುಮಾರು 25 ಸಾವಿರ ಪ್ರವಾಸಿಗರು ಆಗಮಿಸಿದ್ದಾರೆ. ಅಂತೆಯೇ ವಿಶ್ವವಿಖ್ಯಾತ ಮೈಸೂರು ಅರಮನೆಗೆ ಭೇಟಿ ನೀಡಿದವರ ಸಂಖ್ಯೆ ಸುಮಾರು 20 ಸಾವಿರ.

ಸುಮಾರು 80 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಮೃಗಾಲಯವನ್ನು ಕೋವಿಡ್-19 ನಿರ್ಬಂಧಗಳ ಕಾರಣದಿಂದ ಮುಚ್ಚಲಾಗಿತ್ತು. ಇದರಿಂದಾಗಿ ಆದಾಯದ ಮೂಲ ಎನಿಸಿದ ದ್ವಾರ ಶುಲ್ಕವಿಲ್ಲದೇ ನಿರ್ವಹಣೆ ಕಷ್ಟಕರವಾಗಿತ್ತು. ಪ್ರಾಣಿಗಳ ಆಹಾರಕ್ಕಾಗಿ ದಾನಿಗಳಿಂದ ದೇಣಿಗೆ ಕೇಳಲಾಗಿತ್ತು. ಮೃಗಾಲಯದಲ್ಲಿ ಸುಮಾರು 1,400 ಪ್ರಾಣಿ, ಪಕ್ಷಿ ಹಾಗೂ ಸರೀಸೃಪಗಳಿವೆ.

ಸೋಮವಾರ ಕೂಡಾ ಸುಮಾರು 14 ಸಾವಿರ ಪ್ರವಾಸಿಗರು ಭೇಟಿ ನೀಡಿರುವುದು ಮೃಗಾಲಯದ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಇಡೀ ವರ್ಷ ಸಾಮಾನ್ಯ ದಿನಗಳಲ್ಲಿ ಮೃಗಾಲಯಕ್ಕೆ 7 ರಿಂದ 10 ಸಾವಿರ ಮಂದಿ ಭೇಟಿ ನೀಡುತ್ತಾರೆ. ವಾರಾಂತ್ಯದಲ್ಲಿ ಮತ್ತು ರಜಾದಿನಗಳಲ್ಲಿ ಈ ಪ್ರಮಾಣ ದುಪ್ಪಟ್ಟು ಅಥವಾ ಮೂರು ಪಟ್ಟು ಆಗುತ್ತದೆ. ದಸರಾ ಹಬ್ಬದ ಸಂದರ್ಭದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚುತ್ತದೆ. 2019ರಲ್ಲಿ ಒಂದೇ ದಿನ 40 ಸಾವಿರ ಮಂದಿ ಭೇಟಿ ನೀಡಿದ್ದು, ಇದು ರಾಜ್ಯದ ಅತ್ಯಂತ ಜನದಟ್ಟಣೆಯ ಪ್ರವಾಸಿ ತಾಣ ಎನಿಸಿಕೊಂಡಿತ್ತು.

ಕಳೆದ ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ಮೃಗಾಲಯಕ್ಕೆ ದೊಡ್ಡ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿದ್ದಾರೆ. ಮೃಗಾಲಯದಲ್ಲಿ ಒಂದು ಬಾರಿಗೆ 40 ಸಾವಿರ ಮಂದಿಯ ಭೇಟಿಗೆ ಅವಕಾಶವಿದೆ" ಎಂದು ನಿರ್ದೇಶಕ ಅಜಿತ್ ಕುಲಕರ್ಣಿ ಹೇಳಿದ್ದಾರೆ.

ಕೋವಿಡ್-19 ಪ್ರಕರಣಗಳ ಇಳಿಕೆ, ಸಾರ್ವತ್ರಿಕ ರಜಾ ದಿನ ಹಾಗೂ ಶಾಲೆಗಳಿಗೆ ರಜೆ ಇರುವುದು ಮೈಸೂರಿಗೆ ಪ್ರವಾಸಿಗರ ಹೆಚ್ಚಳಕ್ಕೆ ಕಾರಣ. ಇತ್ತೀಚಿನ ದಿನಗಳಲ್ಲಿ ಹೋಟೆಲ್‍ಗಳು ಕೂಡಾ ಭರ್ತಿಯಾಗುತ್ತಿವೆ ಎಂದು ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News