ಬೆಳಗಾವಿ: ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ಕಿಡಿಗೇಡಿಗಳು
Update: 2022-05-11 12:26 IST
ಬೆಳಗಾವಿ : ಜಿಲ್ಲೆಯ ಮೂಡಲಗಿ ತಾಲೂಕಿನ ಅರಬಾವಿ ಗ್ರಾಮದ ಮಸೀದಿಯೊಂದರ ಮೇಲೆ ಕಿಡಿಗೇಡಿಗಳು ರಾತ್ರೋ ರಾತ್ರಿ ಕೇಸರಿ ಬಣ್ಣದ ಧ್ವಜ ಕಟ್ಟಿರುವ ಘಟನೆ ನಡೆದಿದೆ.
ಅರಬಾವಿ ಗ್ರಾಮದ ಸತ್ತಿಗೇರಿ ಮಡ್ಡಿ ತೋಟದ ಮಸೀದಿ ಮೇಲೆ ಕಿಡಿಗೇಡಿಗಳು ಕೇಸರಿ ಧ್ವಜ ಕಟ್ಟುವ ಮೂಲಕ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ.
ಸ್ಥಳೀಯ ಮುಸ್ಲಿಮರು ಬುಧವಾರ ಬೆಳಗ್ಗೆ ಪ್ರಾರ್ಥನೆಗೆಂದು ಮಸೀದಿಗೆ ತೆರಳಿದಾಗ ಕೇಸರಿ ಧ್ವಜ ಕಟ್ಟಿರುವುದು ಗಮನಕ್ಕೆ ಬಂದಿದೆ.
''ಮಂಗಳವಾರ ತಡರಾತ್ರಿ ಕಿಡಿಗೇಡಿಗಳು ಯಾರೋ ಮಸೀದಿಯ ಮಿನಾರಕ್ಕೆ ಕೇಸರಿ ಧ್ವಜ ಕಟ್ಟಿದ್ದಾರೆ. ಬೆಳಗ್ಗೆ ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಬಳಿಕ ಸ್ಥಳೀಯ ಹಿಂದೂ ಹಾಗೂ ಮುಸ್ಲಿಮ್ ಮುಖಂಡರು ಸೇರಿ ಧ್ವಜವನ್ನು ತೆರವುಗೊಳಿಸಿದ್ದೇವೆ. ಕಿಡಿಗೇಡಿಗಳ ವಿರುದ್ಧ ಪೊಲೀಸರಿಗೆ ದೂರು ನೀಡುವ ಬಗ್ಗೆ ತೀರ್ಮಾನಿಸಿದ್ದೇವೆ'' ಎಂದು ಮಸೀದಿ ಆಡಳಿತ ಸಮಿತಿ ಪದಾಧಿಕಾರಿಯೊಬ್ಬರು ತಿಳಿಸಿದರು.