ವಿದೇಶ ಪ್ರವಾಸಕ್ಕೆ ತೆರಳಿದ ಮಂಡ್ಯದ ವಿದ್ಯಾರ್ಥಿನಿ ವಿರುದ್ಧ ಸುಳ್ಳು ಸುದ್ದಿ: ಎಸ್ ಪಿ ಹೇಳಿದ್ದೇನು?

Update: 2022-05-14 07:05 GMT
ವಿದ್ಯಾರ್ಥಿನಿ ಬೀಬಿ ಮುಸ್ಕಾನ್

ಮಂಡ್ಯ: ಕಾಲೇಜಿಗೆ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿ ಮುಸ್ಕಾನ್ ಗೆ ನೂರಾರು ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಹಲ್ಲೆಗೆ ಮುಂದಾಗಿದ್ದ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ಭಾರೀ ಸುದ್ದಿಯಾಗಿದ್ದರು.  

ಇದೀಗ ಕನ್ನಡದ ಕೆಲವೊಂದು ಸುದ್ದಿ ಚಾನೆಲ್ ಗಳು ವಿದ್ಯಾರ್ಥಿನಿಗೆ ಸಂಬಂಧವೇ ಇಲ್ಲದ ವರದಿಗಳನ್ನು ಪ್ರಕಟಿಸುತ್ತಿದ್ದು, ವಿದ್ಯಾರ್ಥಿನಿಯನ್ನು ಪ್ರಕರಣವೊಂದರ ಆರೋಪಿ ಎಂಬಂತೆ ಬಿಂಬಿಸುತ್ತಿರುವುದು ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.

ಪಬ್ಲಿಕ್ ಟಿವಿಯ ವೆಬ್ ಸೈಟ್ ನಲ್ಲಿ ''ಪೊಲೀಸರನ್ನ ಯಾಮಾರಿಸಿ ವಿದೇಶಕ್ಕೆ ಹಾರಿದ ಅಲ್ಲಾಹು ಅಕ್ಬರ್ ಕೂಗಿದ ವಿದ್ಯಾರ್ಥಿನಿ'' ಎಂಬ ಸುದ್ದಿಯನ್ನು ವರದಿ ಮಾಡಿದೆ. ಆದರೆ ವಿದ್ಯಾರ್ಥಿನಿ ಮುಸ್ಕಾನ್ ಗೆ ಪೊಲೀಸರೊಂದಿಗೆ ಅನುಮತಿ ಪಡೆದುಕೊಳ್ಳುವ ಅವಶ್ಯಕತೆ ಇಲ್ಲ. ಅವರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ'' ಎಂದು ಮಂಡ್ಯ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಯತೀಶ್ ಎ.ನ್ 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ. 

ಇನ್ನು ಪಬ್ಲಿಕ್ ಟಿವಿ ವರದಿ ಮಾಡಿದ್ದ ಅದೇ ಶೀರ್ಷಿಕೆ ಇಟ್ಟುಕೊಂಡು ಐದಾರು ಕನ್ನಡದ ಸುದ್ದಿ ಚಾನೆಲ್ ಗಳು ಅದೇ ಧಾಟಿಯಲ್ಲಿ ವರದಿ ಮಾಡಿವೆ ( ಸ್ಕ್ರೀನ್ ಶಾಟ್ ಕೆಳಗೆ ಇದೆ) 

ಮುಸ್ಕಾನ್ ತನ್ನ ಕುಟುಂಬದ ಜತೆ ಸೌದಿಗೆ ಎಪ್ರಿಲ್ 25ರಂದು ಧಾರ್ಮಿಕ ಪ್ರವಾಸಕ್ಕೆ ತೆರಳಿದ್ದಾರೆ. ಇದನ್ನೇ ನೆಪವಾಗಿಟ್ಟುಕೊಂಡ ಇಂಥ ಮಾದ್ಯಮಗಳು ಸುಳ್ಳು ಸುದ್ದಿಗಳನ್ನು ವರದಿ ಮಾಡುತ್ತಿವೆ. 



ಮಂಡ್ಯ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಯತೀಶ್ ಎ.ನ್  ಹೇಳಿದ್ದೇನು? :  ಪಿ.ಇ. ಎಸ್ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಸೌದಿ ಪ್ರವಾಸಕ್ಕೆ ಪೊಲೀಸ್ ಇಲಾಖೆ ಅನುಮತಿ ಅಗತ್ಯವಿಲ್ಲ. ಮುಸ್ಕಾನ್ ವಿದೇಶ ಪ್ರವಾಸ ಹೊರಟಿರುವುದು ಅವರ ವೈಯಕ್ತಿಕ ವಿಚಾರ. ಅದಕ್ಕೂ ನಮಗೂ ಸಂಬಂಧವಿಲ್ಲ.  ಮುಸ್ಕಾನ್ ಮತ್ತು ಅವರ ಕುಟುಂಬದವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. 

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ದುಷ್ಕೃತ್ಯ ಎಸಗಿ ಇನ್ನೊಬ್ಬರ ಮೇಲೆ ಆರೋಪ ಬರುವಂತೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಲು ಯತ್ನಿಸಿದ ಕೆಲವೊಂದು ನ್ಯೂಸ್ ಚಾನೆಲ್ ಗಳಿಗೆ ಡಿಸಿಪಿ ಭೀಮಾಶಂಕರ್​​ ಗುಳೇದ್ ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಇದೀಗ ಮತ್ತೆ ಸುಳ್ಳು ಸದ್ದಿಗಳನ್ನು ವರದಿ ಮಾಡುವುದನ್ನು ಮುಂದಿವರಿಸಿವೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News