ದೇಶದ ಜನರೇ ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡಿರುವಾಗ ನಾವು ಟಾರ್ಗೆಟ್ ಮಾಡುವ ಆವಶ್ಯಕತೆ ಇಲ್ಲ: ಸಿ.ಟಿ.ರವಿ
ಚಿಕ್ಕಮಗಳೂರು, ಮೇ 11: ದೇಶದ ಜನರು ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರನ್ನು ನಾವು ಟಾರ್ಗೆಟ್ ಮಾಡುವ ಆವಶ್ಯಕತೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಡಿ.ಕೆ.ಶಿವಕುಮಾರ್ ಗೆ ತಿರುಗೇಟು ನೀಡಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ತಮ್ಮನ್ನು ವೈಭವೀಕರಿಸಿಕೊಳ್ಳಬಹುದು, ಅವರ ವೈಯಕ್ತಿಕ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡಲ್ಲ. ಅವರ ರಾಜಕೀಯ ಸಾಮರ್ಥ್ಯದ ಬಗ್ಗೆ ಸಾಬೀತು ಮಾಡಿರುವುದು ಕನಕಪುರದಲ್ಲಷ್ಟೇ ಎಂದ ಅವರು, ಉಪ್ಪು ತಿಂದವರು ನೀರು ಕುಡಿಯುತ್ತಾರೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಏನು ತಪ್ಪು ಮಾಡಿಲ್ಲ ಎಂದರೇ ಆತಂಕ ಪಡುವ ಆವಶ್ಯಕತೆ ಇಲ್ಲ. ರಾಜಕೀಯದಲ್ಲಿ ಇದ್ದೇನೆಂದು ಶೆಲ್ಟರ್ ತೆಗೆದುಕೊಳ್ಳಲು ಆಗಲ್ಲ. ತಪ್ಪು ಮಾಡದೇ ಜೈಲಿಗೆ ಹೋಗುವುದು ಶಕ್ತಿಯಾಗುತ್ತದೆ. ತಪ್ಪು ಮಾಡಿ ಜೈಲಿಗೆ ಹೋಗುವುದರಿಂದ ಅವರ ರಾಜಕೀಯ ಅಂತ್ಯ ಆಗುತ್ತೆ ಎಂದರು.
ಉತ್ತರ ಪ್ರದೇಶದಲ್ಲಿ ಮೈ ಲಡಕೀ ಹೂಂ, ಲಡ್ ಸಕ್ತಾ ಹೂ ಎಂದು ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಚುನಾವಣೆ ಮಾಡಿದರು. ಏನಾಯ್ತು ಎಂದು ಪ್ರಶ್ನಿಸಿದ ಅವರು, 387 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಡೆಪಾಸಿಟ್ ಕಳೆದುಕೊಂಡಿದೆ, ಅವರೇ ಅಧಿಕಾರದಲ್ಲಿದ್ದ ಪಂಜಾಬ್‍ನಲ್ಲಿ ಹೀನಾಯವಾಗಿ ಸೋತರು ಎಂದ ಅವರು, ದೇಶದ ಜನರು ಕಾಂಗ್ರೆಸ್ ತಿರಸ್ಕರಿಸಿರುವಾಗ ಡಿ.ಕೆ.ಶಿವಕುಮಾರ್ ಅವರನ್ನು ನಾವು ಟಾರ್ಗೆಟ್ ಮಾಡಿ ಏನಾಗಬೇಕು ಎಂದರು.
ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಬ್ರಾಹಿಂ ಅವರನ್ನು ರಾಜಕೀಯ ವಿಧೂಷಕ ಎನ್ನುತ್ತಾರೆ. ನಾನು ಹಾಗೆ ಹೇಳಲ್ಲ, ಅವರನ್ನು ರಾಜಕೀಯವಾಗಿ ಯಾರೂ ಅವರನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಟಾಂಗ್ ನೀಡಿದರು.
ಸಿಎಂ ಇಬ್ರಾಹಿಂ ಎಲ್ಲ ಪಾತ್ರಕ್ಕೂ ಸೂಕ್ತವಾಗುವ ವ್ಯಕ್ತಿ. ಜನತಾ ಪಕ್ಷದಲ್ಲಿದ್ದಾಗ ಇಂದಿರಾಗಾಂಧಿ ಬಗ್ಗೆ ನೀಡಿದ್ದ ಹೇಳಿಕೆ ನೆನಪು ಮಾಡಲು ನನ್ನಿಂದ ಆಗಲ್ಲ. ಕಾಂಗ್ರೆಸ್‍ಗೆ ಬಂದ ಮೇಲೆ ದೇವೇಗೌಡರ ಬಗ್ಗೆ ಮಾತನಾಡಿದ್ದ ಹಳೇ ಕ್ಯಾಸೆಟ್ ಹಾಕಿ ನೋಡಲಿ, ಆಗ ಇಬ್ರಾಹಿಂ ಅವರಿಗೆ ದೇವೇಗೌಡರ ಮೇಲಿರುವ ಪ್ರಾಮಾಣಿಕ ಭಾವನೆ ಏನೆಂದು ತಿಳಿಯುತ್ತದೆ ಎಂದರು.
ಅಟಲ್ ಬಿಹಾರಿ ವಾಜಿಪೇಯಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಡ್ವಾಣಿ, ಅಮಿತ್ ಶಾ ಅವರು ನಮ್ಮ ನಾಯಕರು. ನಾಯಕರನ್ನು ನಾವು ನಾಯಕರ ಸ್ಥಾನದಲ್ಲೇ ನೋಡುತ್ತೇವೆ. ದೇವರ ಸ್ಥಾನದಲ್ಲಿ ಅಲ್ಲ. ನಮಗೆ ಭಾರತ ಮಾತೆಯೇ ದೇವರು, ಎಲ್ಲಾ ದೇವರಿಗಿಂತ ಭಾರತ ಮಾತೆಯೇ ದೊಡ್ಡ ದೇವರು ಎಂದರು.