ಸಂಪುಟ ಪುನಾರಚನೆ | ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು: ಮುಖ್ಯಮಂತ್ರಿ ಬೊಮ್ಮಾಯಿ

Update: 2022-05-11 12:58 GMT
ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿಯಾದ ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ ರಚನೆಗೆ ಸಂಬಂಧಿಸಿದಂತೆ ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬುಧವಾರ ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿಯ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.

ರಾಜ್ಯ ರಾಜಕೀಯ ಬೆಳವಣಿಗೆಯ ಆಧಾರದಲ್ಲಿ ಪಕ್ಷದ ವರಿಷ್ಠರು ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಯೂ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.

ಮುಂಬರಲಿರುವ ರಾಜ್ಯ ಸಭಾ, ವಿಧಾನ ಪರಿಷತ್, ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಸಚಿವ ಸಂಪುಟದ ಬಗ್ಗೆ   ಸುದೀರ್ಘವಾದ ಚರ್ಚೆ ಮಾಡಲಾಗಿದೆ ಎಂದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿ,  ಒಟ್ಟಾರೆ  ರಾಜಕೀಯ ಸ್ಥಿತಿಗತಿಗಳ ಆಧಾರದ ಮೇಲೆ ನಿರ್ಣಯಗಳು ಆಗುತ್ತವೆ.  ಸ್ಥಿತಿ ಗತಿಗಳನ್ನು ಅವರಿಗೆ ವಿವರಿಸಲಾಗಿದೆ.  ಮುಂದಿನ ಒಂದು ವಾರ ಬಹಳ ಮುಖ್ಯ. ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ದೊಡ್ಡ ಪ್ರಮಾಣದ ಚುನಾವಣೆ ಇರುವುದರಿಂದ ಅದರ ಪರಿಣಾಮಗಳೇನು ಎಂದು ಅಧ್ಯಯನ ಮಾಡಿ ತಿಳಿಸುವುವುದಾಗಿ ಹೇಳಿದ್ದಾರೆ.  

ಹೆಸರುಗಳ ಬಗ್ಗೆ ಚರ್ಚೆಯಾಗಿಲ್ಲ: ಸಚಿವ ಸಂಪುಟ ವಿಸ್ತರಣೆಯ ತೀರ್ಮಾನವಾದ ಮೇಲೆ ಅದರ ಸ್ವರೂಪ ಗೊತ್ತಾಗಲಿದೆ. ಸಂಪುಟಕ್ಕೆ ಸೇರ್ಪಡೆಯಾಗುವವರ ಹೆಸರುಗಳು ಚರ್ಚೆಯಾಗಿಲ್ಲ. ಹೆಸರುಗಳನ್ನು ತೀರ್ಮಾನ ಮಾಡುವ ಸಂದರ್ಭ ಬರಲಿಲ್ಲ.   ಒಟ್ಟಾರೆ ಸ್ಥಿತಿಗತಿಗಳು, ಅದರ ಆಧಾರದ ಮೇಲೆ ಸಚಿವ ಸಂಪುಟದ ವಿಸ್ತರಣೆ ಬಗ್ಗೆ ಮಾತ್ರ ಚರ್ಚೆಯಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಇತ್ತೀಚೆಗೆ ವಿಜಯನಗರದಲ್ಲಿ ನಡೆದ ಕಾರ್ಯಕಾರಿಣಿ ಸಮಿತಿ ಸಭೆಗೆ ಬಂದಾಗಲೂ ಜೆ.ಪಿ. ನಡ್ಡಾ ಅವರೊಂದಿಗೆ ಈ ಬಗ್ಗೆ ಚರ್ಚೆ ಮಾಡಿದ್ದೆವು.  ಅಮಿತ್ ಷಾ ಮತ್ತು ನಡ್ಡಾ ಅವರು ಸೇರಿ ಒಂದು ತೀರ್ಮಾನವನ್ನು ಮಾಡುತ್ತಾರೆ. 

ನಿನ್ನೆ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಇಂದು ಮಧ್ಯಾಹ್ನ ಚುನಾವಣಾ ಆಯೋಗ ತಮ್ಮ ಕಾನೂನು ಸಲಹೆಗಾರರೊಂದಿಗೆ ಮಾತನಾಡುವುದಾಗಿ  ತಿಳಿಸಿದ್ದಾರೆ. ಅವರು ಸರ್ಕಾರಕ್ಕೆ ಏನು ತಿಳಿಸುತ್ತಾರೊ ತೀರ್ಮಾನವನ್ನು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News