ಲೋಕೋಪಯೋಗಿ ಇಂಜಿನಿಯರ್ ಪರೀಕ್ಷೆ ಅಕ್ರಮ: ಆರೋಪಿ ರುದ್ರಗೌಡ 10 ದಿನ ಪೊಲೀಸ್ ವಶಕ್ಕೆ

Update: 2022-05-11 13:13 GMT

ಬೆಂಗಳೂರು, ಮೇ 11: ಲೋಕೋಪಯೋಗಿ ಇಂಜಿನಿಯರ್ ಪರೀಕ್ಷೆಯಲ್ಲಿ ಅಕ್ರಮ ಆರೋಪ ಪ್ರಕರಣದ ಆರೋಪಿ ಎನ್ನಲಾದ ರುದ್ರಗೌಡ ಡಿ. ಪಾಟೀಲ್‍ನನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನಗರದ 1ನೆ ಎಸಿಎಂಎಂ ಕೋರ್ಟ್ ಆದೇಶಿಸಿದೆ.

2021ರಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಲೋಕೋಪಯೋಗಿ ಇಂಜಿನಿಯರ್ ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಓರ್ವ ಅಭ್ಯರ್ಥಿಯನ್ನ ಪೊಲೀಸರು ಬಂಧಿಸಿದ್ದರು. ಬಳಿಕ ಕೆಲವು ಅಭ್ಯರ್ಥಿಗಳನ್ನು ವಿಚಾರಣೆ ನಡೆಸಿದಾಗ ಬ್ಲೂಟೂತ್ ಡಿವೈಸ್ ಬಳಕೆಯ ಹಿಂದೆ ಆರ್.ಡಿ. ಪಾಟೀಲ್ ಪಾತ್ರ ಕಂಡುಬಂದಿತ್ತು.

ಬಳಿಕ ಪ್ರಕರಣದ ಸಂಬಂಧ ಕಾಲೇಜು ಮುಖ್ಯಸ್ಥ ನಾಗರಾಜ್ ಕಾಮ್ಲೆ ಸೇರಿ 16 ಜನರನ್ನ ಬಂಧಿಸಲಾಗಿದೆ. ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ಆರ್.ಡಿ. ಪಾಟೀಲ್ ಬಂಧನವಾಗುತ್ತಿದ್ದಂತೆ ಕಲಬುರಗಿಗೆ ತೆರಳಿದ್ದ ಅನ್ನಪೂರ್ಣೇಶ್ವರಿ ನಗರ ಪೊಲೀಸರ ತಂಡ ಬಾಡಿ ವಾರೆಂಟ್ ಮೇಲೆ ಆರೋಪಿಯನ್ನ ಬೆಂಗಳೂರಿಗೆ ಕರೆತಂದಿದೆ. ಸದ್ಯ ಆರ್.ಡಿ ಪಾಟೀಲ್‍ನನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ 1ನೆ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News