PSI ನೇಮಕಾತಿ ಅಕ್ರಮ: ದಿವ್ಯಾ ಪತಿ ಸೇರಿ 12 ಜನರ ಜಾಮೀನು ಅರ್ಜಿ ತಿರಸ್ಕೃತ

Update: 2022-05-11 15:27 GMT
ದಿವ್ಯಾ ಹಾಗರಗಿ

ಕಲಬುರಗಿ, ಮೇ 11: ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವ 12 ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಕಲಬುರಗಿ 3ನೆ ಜೆಎಂಎಫ್ ನ್ಯಾಯಾಲಯ ಹಾಗೂ 1ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳು ಬುಧವಾರ ವಜಾಗೊಳಿಸಿವೆ. 

ಮೇ 9ರಂದು ವಿಚಾರಣೆ ನಡೆಸಿದ್ದ 3ನೆ ಜೆಎಂಎಫ್ ಕೋರ್ಟ್ ಬುಧವಾರಕ್ಕೆ ತೀರ್ಪನ್ನು ಕಾಯ್ದಿರಿಸಿತ್ತು. ಜಾಮೀನು ನೀಡಿದರೆ ವಿಚಾರಣೆಗೆ ಹಿನ್ನಡೆಯಾಗಲಿದ್ದು, ಹೊರಬಂದ ಬಳಿಕ ಆರೋಪಿಗಳು ಸಾಕ್ಷ್ಯ ನಾಶಕ್ಕೆ ಯತ್ನಿಸುವ ಸಾಧ್ಯತೆ ಇದೆ ಎಂದು ಸಿಐಡಿ ಪರ ವಕೀಲ, ಸಹಾಯಕ ಸರಕಾರಿ ಅಭಿಯೋಜಕ ಶಿವಶರಣಪ್ಪ ಹೋತಪೇಟ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಈ ಅಂಶಗಳನ್ನು ಪರಿಗಣಿಸಿದ ನ್ಯಾಯಪೀಠ, ಆರೋಪಿಗಳಾದ ಮಹಾಂತೇಶ ಪಾಟೀಲ, ಹಯ್ಯಾಳಿ ನಿಂಗಣ್ಣ ದೇಸಾಯಿ, ರುದ್ರಗೌಡ ಬಲರಾಯಪ್ಪ, ಶರಣಪ್ಪ ಬೋರಗಿ, ವಿಶಾಲ ಬಸವರಾಜ ಶಿರೂರ, ಮಲ್ಲಿಕಾರ್ಜುನ ಮೇಳಕುಂದಿ, ದಿವ್ಯಾ ಅವರಿಗೆ ಆಶ್ರಯ ನೀಡಿದ ಮಹಾರಾಷ್ಟ್ರದ ಸುರೇಶ ಕಾಟೆಗಾಂವ, ಕಾಳಿದಾಸ ಹಾಗೂ ದಿವ್ಯಾ ಕಾರು ಚಾಲಕ ಸದ್ದಾಂ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತು. 

ಇತರ ಮೂವರು ಆರೋಪಿಗಳಾದ ದಿವ್ಯಾ ಹಾಗರಗಿ ಪತಿ ರಾಜೇಶ್ ಹಾಗರಗಿ, ಅಭ್ಯರ್ಥಿ ಪ್ರವೀಣಕುಮಾರ್ ಹಾಗೂ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಶಿಕ್ಷಕಿ ಸುಮಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ 1ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಶುಕ್ಲಾಕ್ಷ ಪಾಲನ್ ಅವರು ಎಲ್ಲ ಮೂವರ ಅರ್ಜಿಗಳನ್ನು ತಿರಸ್ಕರಿಸಿದರು. ಸಿಐಡಿ ಪರವಾಗಿ ಒಂದನೇ ಹೆಚ್ಚುವರಿ ಸರಕಾರಿ ಅಭಿಯೋಜಕ ಎಸ್.ಆರ್.ನರಸಿಂಹಲು ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News