ಹಾಸನ: ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಂಧಿತ ಆರೋಪಿಯ ಅಣ್ಣ ಆತ್ಮಹತ್ಯೆ

Update: 2022-05-11 16:27 GMT
ವಾಸು 

ಹಾಸನ: ಮಾ, 11: ಪಿಎಸ್‌ಐ ನೇಮಕಾತಿ ಹಗರಣದ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದ್ದು,  ಇದೀಗ ಬಂಧಿತ ಆರೋಪಿಯ ಅಣ್ಣನೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಹಾಸನದ ಹೊಳೆನರಸೀಪುರ ತಾಲೂಕಿನ ಗುಂಜೇವು ಗ್ರಾಮದ ಮನುಕುಮಾರ್ ಎಂಬಾತ ಪಿಎಸ್‌ಐ ಪರೀಕ್ಷೆ ಬರೆದು 50 ನೇ ರ್ಯಾಂಕ್ ಪಡೆದು ಆಯ್ಕೆಯಾಗಿದ್ದ, ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಪಿಎಸ್‌ಐ ಅಭ್ಯರ್ಥಿಗಳನ್ನು ವಿಚಾರಣೆ ನಡೆಸಿದ್ದ ಸಿಐಡಿ ಪೊಲೀಸರು ಕೆಲವರನ್ನು ಬಂಧನ ಮಾಡಿದ್ದರು. ಈ ಹಂತದಲ್ಲಿ ಸಿಐಡಿ ಅಧಿಕಾರಿಗಳು ಅಭ್ಯರ್ಥಿ ಮನುಕುಮಾರ್‌ನನ್ನ ಬಂಧಿಸಿದ್ದರು. ಪ್ರಕರಣದಲ್ಲಿ ತಮ್ಮನ ಬಂಧನವಾಗುತ್ತಿದ್ದಂತೆ ಅಣ್ಣ ವಾಸು (36) ತುಂಬಾ ನೊಂದುಕೊಂಡಿದ್ದ ಎನ್ನಲಾಗಿದೆ.

ಹೊಳೆನರಸೀಪುರ ಪಟ್ಟಣದಲ್ಲೇ ವಾಸವಾಗಿದ್ದುಕೊಂಡು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಡಿ-ಗ್ರೂಪ್ ಕೆಲಸ ನಿರ್ವಹಿಸುತ್ತಿದ್ದ ವಾಸು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಮತ್ತು ಹಲವು ದಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ ಎಂದು ಮೃತರ ಪತ್ನಿ ತಿಳಿಸಿದ್ದಾರೆ.

ತಮ್ಮನ ಪಿಎಸ್‌ಐ ಕೆಲಸಕ್ಕೆಂದು ಮಧ್ಯವರ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ಹಣ ಹೊಂದಿಸಿಕೊಟ್ಟಿದ್ದರು ಎಂದು ಹೇಳಲಾಗಿದೆ. ಹಣವೂ ಹೊಯ್ತು, ತಮ್ಮನ ಕೆಲಸವೂ ಹೊಯ್ತು ಅಂತ ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಮತ್ತೊಂದು ಕಡೆ ವಾಸುವಿನ ಅಂತಿಮ ದರ್ಶನಕ್ಕೆ ಮನುಕುಮಾರ್‌ ನನ್ನ ಕರೆದೊಯ್ಯಲು ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಸದ್ಯ ಮನುಕುಮಾರ್‌ ಸಿಐಡಿ ಕಸ್ಟಡಿಯಲ್ಲಿದ್ದಾನೆ.

ಪಿಎಸ್‌ಐ ಹಗರಣದ ನಂತರ ವಾಸು ಅವರು ಆತ್ಮಹತ್ಯೆಗೆ ಶರಣಾಗಿದ್ದು,  ಕುಟುಂಬಸ್ಥರು ಹಗರಣಕ್ಕೂ ಅವರ ಸಾವಿಗೂ ಸಂಬಂಧ ಇಲ್ಲ ಎಂದು ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News