ಲ್ಯಾಪ್‌ಟಾಪ್‌ ಖರೀದಿಯಲ್ಲಿ 100 ಕೋಟಿ ರೂ. ಅಕ್ರಮ: ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಆರೋಪ

Update: 2022-05-11 18:48 GMT
ಬಸವರಾಜ ರಾಯರೆಡ್ಡಿ

ಬೆಂಗಳೂರು: ಪದವಿ ವಿದ್ಯಾರ್ಥಿಗಳಿಗೆ ವಿತರಿಸಲು ಲ್ಯಾಪ್‌ಟಾಪ್‌ ಖರೀದಿಯಲ್ಲಿ 100 ಕೋಟಿ ರೂ.ಗೂ ಹೆಚ್ಚು ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಭಾಗಿಯಾಗಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಆರೋಪಿಸಿದ್ದಾರೆ. 

ಈ ಕುರಿತು ಇಂದು ಸದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಬಿಜೆಪಿ ಸರ್ಕಾರ ಬಂದಿದ್ದೇ ವಾಮಮಾರ್ಗದಿಂದ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಾನು ಉನ್ನತ ಶಿಕ್ಷಣ ಸಚಿವನಾಗಿದ್ದೆ. ಆಗ ತಲಾ ರೂ. 14,490ರ ದರದಲ್ಲಿ 38,000 ಲ್ಯಾಪ್‌ಟಾಪ್‌ ಖರೀದಿಸಿದ್ದೆವು. ನಂತರ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಜಿ.ಟಿ. ದೇವೇಗೌಡ ಅದೇ ಲ್ಯಾಪ್‌ಟಾಪ್‌ ಅನ್ನು ತಲಾ 28,320ರ ದರದಲ್ಲಿ ಖರೀದಿಸುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ್ದರು. ಆದರೆ, ಆಗ ಖರೀದಿಯಾಗಿರಲಿಲ್ಲ. ಬಿಜೆಪಿ ಸರ್ಕಾರ ಬಂದ ಬಳಿಕ ಅದೇ ದರದಲ್ಲಿ ಖರೀದಿಸಲಾಗಿದೆ’ ಎಂದು ದೂರಿದರು.

‘ಹಿಂದೆ ಖರೀದಿಸಿದ್ದ ಮಾದರಿಯ ಲ್ಯಾಪ್‌ಟಾಪ್‌ ಅನ್ನೇ ದುಪ್ಪಟ್ಟು ದರಕ್ಕೆ ಖರೀದಿಸಲು ಮುಂದಾಗಿರುವ ಕುರಿತು ಅಶ್ವತ್ಥ ನಾರಾಯಣ ಅವರಿಗೆ ಮಾಹಿತಿ ನೀಡಿದ್ದೆವು. ಅವರು ಅಕ್ರಮ ತಡೆಯಲಿಲ್ಲ.  159.26 ಕೋಟಿ ರೂ. ವೆಚ್ಚವಾಗುತ್ತಿದ್ದ ಯೋಜನೆಗೆ 311.28 ಕೋಟಿ ರೂ.  ವೆಚ್ಚ ಮಾಡಲಾಗಿದೆ. ಇದರಲ್ಲಿ  100 ಕೋಟಿ ರೂ. ಗೂ ಹೆಚ್ಚು ಅಕ್ರಮ ನಡೆದಿದೆ’ ಎಂದರು.

'ಶಿಕ್ಷಣ ಸಂಸ್ಥೆ ನಡೆಸುವ ಅಶ್ವತ್ಥ್ ನಾರಾಯಣ ಅವರು ಇಂತಹ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದಕ್ಕೆ ನಾಚಿಕೆಯಾಗಬೇಕು. ಇನ್ನು ಪ್ರಾಮಾಣಿಕ ಮುಖ್ಯಮಂತ್ರಿಯಾಗಿದ್ದ ಎಸ್.ಆರ್ ಬೊಮ್ಮಾಯಿ ಅವರ ಪುತ್ರ ಮುಖ್ಯಮಂತ್ರಿ ಬೊಮ್ಮಾಯಿ ಅವರು ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿರುವುದು ನೋಡಿದರೆ ಅಸಹ್ಯವಾಗುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಯರಡ್ಡಿ ಆರೋಪ ದುಸ್ಸಾಹಸ: ಸಚಿವ ಅಶ್ವತ್ಥ್ ನಾರಾಯಣ 

ಕಾಂಗ್ರೆಸ್-ಜೆಡಿಎಸ್  ಸಮ್ಮಿಶ್ರ ಸರಕಾರದ ಅವಧಿಯಲ್ಲಿ  ಲ್ಯಾಪ್‌ಟಾಪ್ ಖರೀದಿಯಲ್ಲಿ ನಡೆದಿರಬಹುದಾದ ಅಕ್ರಮಗಳನ್ನು ಬಿಜೆಪಿ ಸರಕಾರದ ತಲೆಗೆ ಕಟ್ಟಲು ಕಾಂಗ್ರೆಸ್ ಪಕ್ಷದ ನಾಯಕ ಬಸವರಾಜ ರಾಯರಡ್ಡಿ ಪ್ರಯತ್ನಿಸಿರುವುದು ದುಸ್ಸಾಹಸ. ಇದು ಆ ಪಕ್ಷ ಇಂಗು ತಿಂದ ಮಂಗನ ಸ್ಥಿತಿಯಲ್ಲಿ ಇರುವುದನ್ನು ಸೂಚಿಸುತ್ತದೆ ಎಂದು ಸಚಿವ ಅಶ್ವತ್ಥ್ ನಾರಾಯಣ ಪ್ರಿಕ್ರಿಯಿಸಿದ್ದಾರೆ . 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News