ಬಿಜೆಪಿ ಸರಕಾರದ ದಲಿತ ವಿರೋಧಿ ಎಂಬುದಕ್ಕೆ ಸಾಕ್ಷಿ: ಡಿ.ಕೆ.ಶಿವಕುಮಾರ್

Update: 2022-05-11 19:06 GMT

ಬೆಂಗಳೂರು, ಮೇ 11: ‘ಶೋಷಣೆಗೆ ಒಳಗಾಗಿರುವ ಎಸ್ಸಿ-ಎಸ್ಟಿಗಳಿಗೆ ರಕ್ಷಣೆ ನೀಡಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಪೆÇಲೀಸ್ ಅಧಿಕಾರಿ ಡಾ.ರವೀಂದ್ರನಾಥ್ ರಾಜೀನಾಮೆ ಪ್ರಕರಣ ರಾಜ್ಯ ಬಿಜೆಪಿ ಸರಕಾರದ ದಲಿತ ವಿರೋಧಿ ಎಂಬುದಕ್ಕೆ ಸಾಕ್ಷಿಯಾಗಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಟೀಕಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಚಿವ ಪ್ರಭುಚೌಹಾಣ್ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ನಕಲಿ ಜಾತಿ ಪ್ರಮಾಣ ಪತ್ರ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ರವೀಂದ್ರನಾಥ್ ನೋಟಿಸ್ ಜಾರಿ ಮಾಡಿದ್ದರು. ಆದರೆ ಬಿಜೆಪಿ ಸರಕಾರ ಇವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆಂಬ ಗುಸು, ಗುಸು ಮಾಹಿತಿ ಬಂದಿದೆ. ಇದರಿಂದ ಬೇಸತ್ತಿರುವ ರವೀಂದ್ರನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ' ಎಂದರು.

‘ಕೂಡಲೇ ಸರಕಾರ ವರ್ಗಾವಣೆ ನಿರ್ಧಾರವನ್ನು ರದ್ದು ಮಾಡಿ, ಈ ಅಧಿಕಾರಿಯನ್ನು ಮತ್ತೆ ಅದೇ ಹುದ್ದೆಗೆ ನೇಮಿಸಿ ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣಗಳ ಪಾರದರ್ಶಕ ಹಾಗೂ ನ್ಯಾಯಬದ್ಧ ವಿಚಾರಣೆಗೆ ಅವಕಾಶ ಮಾಡಿಕೊಡಬೇಕು ಎಂದು ಸರಕಾರವನ್ನು ಕಾಂಗ್ರೆಸ್ ಒತ್ತಾಯಿಸುತ್ತದೆ. ತಪ್ಪು ಯಾರೇ ಮಾಡಿದರೂ ತಪ್ಪೇ. ಹೀಗಾಗಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವ ಸಚಿವರು ಹಾಗೂ ರಾಜಕೀಯ ಕಾರ್ಯದರ್ಶಿಯನ್ನು ಸರಕಾರ ಜವಾಬ್ದಾರಿ ಸ್ಥಾನದಿಂದ ಕೈಬಿಡಬೇಕು. ಪ್ರಭು ಚೌಹಾಣ್ ಮಹಾರಾಷ್ಟ್ರದಲ್ಲಿ ಜನಿಸಿದ್ದು, ಅವರು ಎಸ್ಸಿಗೆ ಬರುವುದಿಲ್ಲ. ಆದರೆ, ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಈ ಪ್ರಕರಣವನ್ನು ಚುನಾವಣೆವರೆಗೂ ಮುಂದೂಡುವ ಪ್ರಯತ್ನ ಮಾಡಬಾರದು' ಎಂದು ಅವರು ಕೋರಿದರು.

‘ರವೀಂದ್ರನಾಥ್ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಸಮಾಜ ಕಲ್ಯಾಣ ಸಚಿವಾಲಯದಲ್ಲಿರುವ ರೂಲ್ 8 ಅನ್ನು ರಕ್ಷಣೆ ಮಾಡಬೇಕು, ಆಗ ಎಲ್ಲರಿಗೂ ನ್ಯಾಯ ಸಿಗುತ್ತದೆ. ನಕಲಿ ಜಾತಿ ಪ್ರಮಾಣ ಪತ್ರ ತೆಗೆದುಕೊಂಡಿರುವ 1,097 ಪ್ರಕರಣ ದಾಖಲಾಗಿದ್ದು, 111 ಪ್ರಕರಣಗಳಲ್ಲಿ ತಹಶೀಲ್ದಾರರು, 108 ಕಂದಾಯ ಇನ್‍ಸ್ಪೆಕ್ಟರ್, 111 ಗ್ರಾಮ ಲೆಕ್ಕಿಗರು ನಕಲಿ ಪ್ರಮಾಣ ಪತ್ರೆ ತೆಗೆದುಕೊಂಡಿದ್ದಾರೆಂದು ಪ್ರಕರಣ ದಾಖಲಾಗಿವೆ. ಇನ್ನು 590 ಪ್ರಕರಣಗಳಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವುದು ಸಾಬೀತಾಗಿದ್ದು, ಜಿಲ್ಲಾಧಿಕಾರಿಗಳ ಬಳಿ ಆ ಪ್ರಕರಣಗಳು ಬಾಕಿ ಉಳಿದಿವೆ. 5 ಸಾವಿರ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದ್ದು, ಪ್ರತಿ ವರ್ಷ 1,600 ಕೇಸ್‍ಗಳು ದಾಖಲಾಗುತ್ತಿವೆ. 200ಕ್ಕೂ ಹೆಚ್ಚು ಪ್ರಕರಣಗಳು ತನಿಖಾ ಹಂತದಲ್ಲಿವೆ. ಇಂತಹ ಪ್ರಕರಣಗಳ ವಿಚಾರಣೆಯನ್ನು 60 ದಿನಗಳಲ್ಲಿ ಮುಗಿಸಬೇಕು ಎಂದು ಕಾನೂನಿನಲ್ಲಿ ತಿಳಿಸಲಾಗಿದೆ. ಇನ್ನು ಶಿಕ್ಷೆ ಪ್ರಮಾಣ ಎಸ್ಸಿ ಪ್ರಕರಣಗಳಲ್ಲಿ ಶೇ.16 ಹಾಗೂ ಎಸ್ಸಿ ಶೇ.3ರಷ್ಟು ಮಾತ್ರ ಇದೆ ಎಂದು ಮಾಹಿತಿ ನೀಡಿದರು.

ದೊಡ್ಡ ಸ್ಥಾನದಲ್ಲಿರುವ ಯಾವುದೇ ಅಧಿಕಾರಿ, ರಾಜಕಾರಣಿಯಾಗಲಿ ಇಂತಹ ತಪ್ಪು ಮಾಡಿದರೂ ತಪ್ಪೇ. ಯಾರು ನಕಲಿ ಪ್ರಮಾಣ ಪತ್ರ ಪಡೆದಿದ್ದಾರೋ ಅವರಿಗೂ ಶಿಕ್ಷೆ ಆಗಬೇಕು, ನಕಲಿ ಪ್ರಮಾಣ ಪತ್ರ ನೀಡಿದವರಿಗೂ ಶಿಕ್ಷೆ ಆಗಬೇಕು. ರವೀಂದ್ರನಾಥ್ ಅವರಂತಹ ಪ್ರಾಮಾಣಿಕ, ಸಮಾಜದಲ್ಲಿ ಶೋಷಣೆಗೆ ಒಳಗಾದವರಿಗೆ ರಕ್ಷಣೆ ನೀಡುವ ಅಧಿಕಾರಿಗಳಿಗೆ ಬಿಜೆಪಿ ಸರಕಾರದಲ್ಲಿ ರಕ್ಷಣೆ ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಗಮನ ಸೆಳೆದರು.

‘ಶೋಷಣೆಗೆ ಒಳಗಾದ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ರಕ್ಷಣೆ ನೀಡುವುದು ನಮ್ಮ ಬದ್ಧತೆ. ಇದಕ್ಕಾಗಿ ವಿಶೇಷ ಕಾನೂನು ಇದ್ದು, ಇದರ ದುರುಪಯೋಗಕ್ಕೇ ಒಂದು ದೊಡ್ಡ ವರ್ಗ ಪ್ರಯತ್ನಿಸುತ್ತಿದೆ. ಈ ವ್ಯವಸ್ಥೆ ಸರಿಪಡಿಸುವ ಪ್ರಕ್ರಿಯೆ ಮೇಲಿಂದ ಆರಂಭವಾಗಬೇಕು. ಪಾರದರ್ಶಕ ತನಿಖೆ ಮಾಡಬೇಕು. ಸರಕಾರ ಇಂತಹ ಪ್ರಾಮಾಣಿಕ ಅಧಿಕಾರಿಗಳನ್ನು ಉಳಿಸಿಕೊಳ್ಳಬೇಕು, ಆ ಮೂಲಕ ತನ್ನ ಘನತೆ ಹೆಚ್ಚಿಸಿಕೊಳ್ಳಬೇಕು' ಎಂದು ಅವರು ಸಲಹೆ ನೀಡಿದರು.

ನಾವು ಒತ್ತಡ ಹಾಕಿದ್ದರೆ ತಿಳಿಸಲಿ

‘ಯಾರೇ ತಪ್ಪು ಮಾಡಿರಲಿ, ನಮ್ಮವರೇ ಆಗಲಿ, ಬೇರೆಯವರಾಗಲಿ ಸರಕಾರ ಕಾನೂನು ಕ್ರಮ ಕೈಗೊಳ್ಳಬೇಕು. ಅವರು ಕೆಂಪಯ್ಯಗೆ ನೋಟಿಸ್ ನೀಡಿದ್ದಾರೆಂದಾದರೆ ಅವರು ತಮ್ಮ ಜವಾಬ್ದಾರಿಯನ್ನು ಮಾಡುತ್ತಿದ್ದಾರೆ ಎಂಬುದು ಸಾಬೀತಾಗುತ್ತದೆ. ಈ ವಿಚಾರದಲ್ಲಿ ನ್ಯಾಯಬದ್ಧ ತನಿಖೆ ಆಗಲಿ. ನಾವು ಆ ರೀತಿ ಒತ್ತಡ ಹಾಕಿದ್ದರೆ ಅದನ್ನು ಅವರು ತಿಳಿಸಲಿ. ಬೇರೆಯವರು ಸಾವಿರ ಹೇಳಬಹುದು, ಆದರೆ ಸರಕಾರ ನಡೆಸುತ್ತಿರುವವರು ಅವರು. ವಿಪಕ್ಷದವರು ಹೇಳಿದನ್ನೆಲ್ಲಾ ಸರಕಾರ ಕೇಳುತ್ತದೆಯೇ? ಅವರು ತಮ್ಮ ರಾಜಕೀಯ ಅನುಕೂಲಕ್ಕೆ ಹೇಗೆ ಬೇಕೋ ಹಾಗೆ ಮಾಡುತ್ತಾರೆ’

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News