ಉತ್ತರ ಪ್ರದೇಶ; ಪೊಲೀಸ್ ಮಹಾನಿರ್ದೇಶಕ ಕರ್ತವ್ಯದಿಂದ ಮುಕ್ತಿ: ಕಾರಣ ಏನು ಗೊತ್ತೇ?

Update: 2022-05-12 02:13 GMT
ಮುಕುಲ್ ಗೋಯಲ್ (ಫೈಲ್‌ ಫೋಟೊ)

ಲಕ್ನೋ: ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ ಮುಕುಲ್ ಗೋಯಲ್ ಅವರನ್ನು ರಾಜ್ಯ ಸರ್ಕಾರ ಕರ್ತವ್ಯದಿಂದ ಮುಕ್ತಿಗೊಳಿಸಿದೆ. "ಇಲಾಖೆ ಕೆಲಸಗಳಲ್ಲಿ ಆಸಕ್ತಿ ತೋರದಿರುವುದು ಮತ್ತು ಉದಾಸೀನತೆಯ ಕಾರಣ ನೀಡಿ ಈ ಕ್ರಮ ಕೈಗೊಳ್ಳಲಾಗಿದೆ. ಇದೀಗ ಗೋಯಲ್ ಅವರನ್ನು ನಾಗರಿಕ ರಕ್ಷಣೆ ವಿಭಾಗದ ಮಹಾ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ಗೋಯಲ್ ಅವರ ಹುದ್ದೆಗೆ ಹೊಸ ನೇಮಕಾತಿಯನ್ನು ರಾಜ್ಯ ಸರ್ಕಾರ ಇನ್ನಷ್ಟೇ ಘೋಷಿಸಬೇಕಿದೆ. ಮುಂದಿನ ಡಿಜಿಪಿ ನೇಮಕದ ವರೆಗೆ ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರಿಗೆ ಹೊಣೆಗಾರಿಕೆ ನೀಡಲಾಗಿದೆ. ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ತಿ ಗೋಯಲ್ ಅವರ ಪದಚ್ಯುತಿಯನ್ನು ದೃಢಪಡಿಸಿದ್ದಾರೆ.

"ಕಚೇರಿ ಕೆಲಸದಲ್ಲಿ ಆಸಕ್ತಿ ವಹಿಸದಿರುವುದು, ತಮ್ಮ ಕರ್ತವ್ಯ ನಿಭಾಯಿಸದಿರುವುದು ಮತ್ತು ಸಾಮಾನ್ಯ ಉದಾಸೀನತೆ ಹಿನ್ನೆಲೆಯಲ್ಲಿ ಡಿಜಿಪಿ ಮುಕುಲ್ ಗೋಯಲ್ ಅವರನ್ನು ಕರ್ತವ್ಯದಿಂದ ಮುಕ್ತಿಗೊಳಿಸಿ ನಾಗರಿಕ ರಕ್ಷಣಾ ವಿಭಾಗದ ಮಹಾನಿರ್ದೇಶಕರಾಗಿ ವರ್ಗಾಯಿಸಲಾಗಿದೆ" ಎಂದು ಸರ್ಕಾರದ ವಕ್ತಾರರು ಹೇಳಿದ್ದಾರೆ.

ಪೊಲೀಸ್ ಮಹಾನಿರ್ದೇಶಕರು ಭಾಗವಹಿಸಬೇಕಾಗಿರುವ ಉನ್ನತ ಮಟ್ಟದ ಸಭೆಗಳಲ್ಲಿ ಗೋಯಲ್ ಪಾಲ್ಗೊಳ್ಳದಿರುವುದು ಸಿಎಂ ಆದಿತ್ಯನಾಥ್ ಅವರ ಮುನಿಸಿಗೆ ಕಾರಣ ಎನ್ನಲಾಗಿದೆ. ಇತ್ತೀಚೆಗೆ ಸಿಎಂ ಅಧ್ಯಕ್ಷತೆ ವಹಿಸಿದ್ದ ಕಾನೂನು ಮತ್ತು ಸುವ್ಯವಸ್ಥೆ ಪರಿಶೀಲನೆ ಸಭೆಗೆ ಗೋಯಲ್ ಗೈರು ಹಾಜರಾಗಿದ್ದರು. ಗೋಯಲ್ ಸರ್ಕಾರದ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದೇ ರಜೆಗೆ ಅರ್ಜಿ ಸಲ್ಲಿಸಿ ರಜೆ ಮೇಲೆ ತೆರಳಿದ್ದರು ಎನ್ನುವುದು ಆ ಬಳಿಕ ತಿಳಿದು ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News