ಒಬಿಸಿ ಮೀಸಲಾತಿ ಕಲ್ಪಿಸಿಯೇ ಸ್ಥಳೀಯ ಸಂಸ್ಥೆಗಳ ಚುನಾವಣೆ: ಕಾನೂನು ಸಚಿವ ಮಾಧುಸ್ವಾಮಿ

Update: 2022-05-12 17:07 GMT

ಬೆಂಗಳೂರು, ಮೇ 12: ‘ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳಿಗೆ(ಒಬಿಸಿ) ಮೀಸಲಾತಿ ಇಲ್ಲದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯೂ ಸೇರಿದಂತೆ ಯಾವುದೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವುದಿಲ್ಲ' ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ಗುರುವಾರ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇಲ್ಲದೆ ಚುನಾವಣೆ ಮಾಡುವುದಿಲ್ಲ. ಅದು ಹಳೆಯದೋ ಅಥವಾ ಹೊಸದೋ, ಹಿಂದುಳಿದ ವರ್ಗಗಳಿಗೆ(ಒಬಿಸಿ) ಮೀಸಲಾತಿ ಕಲ್ಪಿಸಿಯೇ ಚುನಾವಣೆ ನಡೆಸುತ್ತೇವೆ. ಎಲ್ಲ ಚುನಾವಣೆಗೂ ಇದು ಅನ್ವಯವಾಗಲಿದೆ' ಎಂದು ವಿವರಣೆ ನೀಡಿದರು.

‘ಹಿಂದುಳಿದ ವರ್ಗಗಳ ಮೀಸಲಾತಿ ಸಂಬಂಧ ನ್ಯಾಯಮೂರ್ತಿ ಭಕ್ತವತ್ಸಲ ಸಮಿತಿ ರಚನೆ ಮಾಡಿದ್ದೇವೆ. ಮೂರು ಅಥವಾ ನಾಲ್ಕು ತಿಂಗಳೊಳಗೆ ವರದಿ ಕೇಳಿದ್ದೇವೆ. ವರದಿ ನೀಡಿದ ನಂತರ ನಾವು ನಿರ್ಧಾರ ಮಾಡುತ್ತೇವೆ' ಎಂದ ಅವರು, ‘ಬಿಬಿಎಂಪಿ ಚುನಾವಣೆ ನಡೆಸುವ ವಿಚಾರ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿಲ್ಲ. ಆದರೆ, ಬೆಳಗ್ಗೆ ಇದರ ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ. ಸಿಎಂ, ಕಾನೂನು ತಜ್ಞರ ಜೊತೆ ಚರ್ಚಿಸಿದ್ದೇವೆ. ಮೀಸಲಾತಿ ಇಲ್ಲದೆ ಚುನಾವಣೆ ನಡೆಸುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

‘ಮೇಲ್ದರ್ಜೆಗೇರಿಸಲ್ಪಟ್ಟ ಪುರಸಭೆ, ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗ್ರಾ.ಪಂ.ಗಳ ಚುನಾವಣೆ ಮುಗಿದುಹೋಗಿದೆ. 51 ಪಂಚಾಯತಿಗಳು ಪಟ್ಟಣ ಪಂಚಾಯಿತಿಗೆ ಸೇರಿಸಿವೆ. ಬೆಂಗಳೂರಿಗೆ 110 ಹಳ್ಳಿಗಳನ್ನು ಬಿಬಿಎಂಪಿಗೆ ಸೇರಿಸಿದ್ದೇವೆ. ಇದೀಗ ಸ್ಥಳೀಯ ಸಂಸ್ಥೆಗಳಡಿ ಮೀಸಲಾತಿ ಗೊಂದಲದ ಕಾರಣ ಚುನಾವಣೆ ನಡೆಸುವುದಿಲ್ಲ' ಎಂದು ಅವರು ತಿಳಿಸಿದರು.

‘ಹೊಸ ತಾಲೂಕುಗಳನ್ನೂ ರಚನೆ ಮಾಡಿದ್ದು, 11 ಸಾವಿರಕ್ಕೊಬ್ಬ ಸದಸ್ಯರಿರಬೇಕು. ಅದಕ್ಕಿಂತ ಕಡಿಮೆ ಜನರಿಗೆ ಸದಸ್ಯರಿರಬಾರದೆನ್ನಲಾಗಿದೆ. ಹೀಗಾಗಿ ಕ್ಷೇತ್ರ ಪುನರ್ ವಿಂಗಡಣೆ ಚುನಾವಣಾ ಆಯೋಗ ಮಾಡಬೇಕು. ಜನಸಂಖ್ಯೆ ಆಧಾರದ ಮೇಲೆ ನಾವು ಮಾಡುತ್ತಿದ್ದೇವೆ. 3 ಅಥವಾ 4 ತಿಂಗಳು ಸಮಯಾವಕಾಶಬೇಕು. ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು ಅವರು ವಿವರಣೆ ನೀಡಿದರು.

‘ಕಟ್ಟಡ ನಿರ್ಮಾಣಕ್ಕೆ ಟೌನ್ ಪ್ಲಾನಿಂಗ್ ಅನುಮತಿ ಕಡ್ಡಾಯವಲ್ಲ. ಹೊಸದಾಗಿ ಕೆಲವು ಗ್ರಾಮಗಳು ಪಟ್ಟಣ ಪ್ರದೇಶಕ್ಕೆ ಸೇರಿವೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಅನುಮತಿ ಬೇಕಿತ್ತು. ಪ್ರಸ್ತುತ ಅದನ್ನು ತೆರವು ಮಾಡಲಾಗಿದೆ. ಸ್ಥಳೀಯ ಮಟ್ಟದಲ್ಲೇ ಅನುಮತಿಗೆ ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಪ್ರದೇಶಕ್ಕೂ ಅನ್ವಯವಾಗಲಿದೆ. 2021ರವರೆಗೆ ನಿರ್ಬಂಧ ತೆರವು ಮಾಡಲಾಗಿದೆ. ಮನೆ ನಿರ್ಮಾಣಕ್ಕೆ ಅನುಮತಿ ಇದೆ ಆದರೆ, ಲೇಔಟ್ ನಿರ್ಮಾಣಕ್ಕೆ ಅನುಮತಿ ಇಲ್ಲ'

-ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News