ದೌರ್ಜನ್ಯದಿಂದ ಮೃತಪಟ್ಟ ಎಸ್ಸಿ-ಎಸ್ಟಿ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ‘ಸರಕಾರಿ ಉದ್ಯೋಗ':ಸಂಪುಟ ಒಪ್ಪಿಗೆ

Update: 2022-05-12 17:15 GMT

ಬೆಂಗಳೂರು, ಮೇ 12: ‘ಕರ್ನಾಟಕ ಸಿವಿಲ್ ಸೇವಾ(ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯದಿಂದ ಮೃತಪಟ್ಟ ಎಸ್ಸಿ-ಎಸ್ಟಿ ವರ್ಗಗಳ ವ್ಯಕ್ತಿಯ ಅವಲಂಬಿತರಿಗೆ ಅನುಕಂಪದ ಆಧಾರದ ನೇಮಕಾತಿ) (ವಿಶೇಷ) (ತಿದ್ದುಪಡಿ) ನಿಯಮಗಳು-2022'ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಂಪುಟ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಮಾಡಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಡಗದ(ಎಸ್ಸಿ-ಎಸ್ಟಿ) ವ್ಯಕ್ತಿಗಳು ದೌರ್ಜನ್ಯದಿಂದ ಮೃತಪಟ್ಟರೆ ಅವರ ಕುಟುಂಬದ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಸರಕಾರಿ ನೌಕರರಿಗೆ ನೀಡುವ ಮಾದರಿಯಲ್ಲೇ ಸರಕಾರಿ ಉದ್ಯೋಗ ನೀಡಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಬೇಕೆಂಬ ನಿಯಮವನ್ನು ಸಡಿಲಿಸಲಾಗಿದ್ದು ಎರಡು ವರ್ಷದೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಕುಟುಂಬದ ಮಗ ಅಥವಾ ಮಗಳು, ವಿಧವೆ ಪತ್ನಿ ಅಥವಾ ಅವರ ಅವಲಂಬಿತರು ಅರ್ಜಿ ಸಲ್ಲಿಸಬಹುದಾಗಿದೆ. ಸರಕಾರಿ ನೌಕರರಿಗೆ ಇರುವ ಸೇವಾ ನಿಯಮಗಳ ಮಾದರಿಯಲ್ಲೇ ಎಸ್ಸಿ-ಎಸ್ಟಿ ದೌರ್ಜನ್ಯಕ್ಕೆ ಒಳಗಾಗಿ ಮೃತಪಟ್ಟ ವ್ಯಕ್ತಿಗಳ ಅವಲಂಬಿತರಿಗೆ ಸರಕಾರಿ ಉದ್ಯೋಗ ನೀಡಲು ನಿಯಮಗಳನ್ನು ರೂಪಿಸಿ ಅವಕಾಶ ಕಲ್ಪಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದರು.

ರೈತರಿಗೆ ಪ್ರೋತ್ಸಾಹಧನ: ‘ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ಪ್ರತಿ ಎಕರೆಗೆ 250 ರೂ.ನಂತೆ ಗರಿಷ್ಠ ಐದು ಎಕರೆಗೆ ಡೀಸೆಲ್ ಸಹಾಯಧನವನ್ನು ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಉನ್ನತೀಕರಣಕ್ಕಾಗಿ 100 ಕೋಟಿ ರೂ. ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ' ಎಂದು ಅವರು ತಿಳಿಸಿದರು.

‘ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬಲ್ಲೂರ ಗ್ರಾಮದಲ್ಲಿ ಸಿಐಪಿಇಟಿ ಸಂಸ್ಥೆಯ ಕೌಶಲ್ಯ ಮತ್ತು ತಾಂತ್ರಿಕ ನೆರವು ಕೇಂದ್ರವನ್ನು 89.94 ಕೋಟಿ ರೂ.ಅಂದಾಜು ವೆಚ್ಚದಲ್ಲಿ ಸ್ಥಾಪಿಸಲು ಒಪ್ಪಿಗೆ ನೀಡಿದೆ. ತಿಂಗಳಾಂತ್ಯಕ್ಕೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅವರು ನಿವೃತ್ತಿ ಹೊಂದಲಿದ್ದು, ಆ ಸ್ಥಾನಕ್ಕೆ ನೂತನ ಮುಖ್ಯ ಕಾರ್ಯದರ್ಶಿಯವರನ್ನು ನೇಮಕಾತಿಗೆ ಮುಖ್ಯಮಂತ್ರಿಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗಿದೆ' ಎಂದು ಅವರು ಹೇಳಿದರು.

‘ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ವಡ್ನಾಳ್ ಪ್ರಾಥಮಿಕ ಕೇಂದ್ರವನ್ನು ಮಂಜೂರು ಮಾಡಿ ಅವಶ್ಯ ಸಿಬ್ಬಂದಿ, ಉಪಕರಣಗಳನ್ನು ಒದಗಿಸಲು ಅನುಮೋದನೆ ನೀಡಿದೆ. ಹಿಮೋಫೀಲಿಯಾ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗಾಗಿ ಅಗತ್ಯವಿರುವ ಆಂಟಿ ಹಿಮೋಫೀಲಿಯಾ ಔಷಧಿಗಳನ್ನು ಖರೀದಿಗೆ 29 ಕೋಟಿ ರೂ.ಒದಗಿಸಲು ಒಪ್ಪಿಗೆ ನೀಡಲಾಗಿದೆ' ಎಂದು ಮಾಧುಸ್ವಾಮಿ ಮಾಹಿತಿ ನೀಡಿದರು.

‘ಕರ್ನಾಟಕ ಸೈಬರ್ ಭದ್ರತಾ ನೀತಿ, 2022-2027ಕ್ಕೆ ಅನುಮೋದನೆ ನೀಡಿದ್ದು, ಕರ್ನಾಟಕ ಖಾಸಗಿ ಭದ್ರತಾ ಸಂಸ್ಥೆಗಳ ನಿಯಮಗಳು 2022ಕ್ಕೆ ಹಾಗೂ ‘ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ, 2022’ಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಮೈಸೂರು ನಗರದ ಕೆಆರ್‍ಎಸ್ ರಸ್ತೆ ವಾಟರ್ ವಕ್ರ್ಸ್ ಹತ್ತಿರದ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಉತ್ತರಾಧಿ ಮಠಕ್ಕೆ ದೀರ್ಘಾವಧಿಗೆ ಗುತ್ತಿಗೆಗೆ ನೀಡಲು ಅನುಮೋದನೆ ನೀಡಿದೆ' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News