ಜಾತಿ ಜನಗಣತಿ ವರದಿ ಕೋಲ್ಡ್ ಸ್ಟೋರೇಜ್‍ಗೆ ಕಳುಹಿಸಿದ್ದು ಸಿದ್ರಾಮಣ್ಣ: ನಳಿನ್‍ಕುಮಾರ್ ಕಟೀಲ್

Update: 2022-05-12 18:27 GMT

ಬೆಂಗಳೂರು, ಮೇ 12: ಜಾತಿ ಜನಗಣತಿ ವರದಿಗೆ ಸಹಿ ಇಲ್ಲದೆ ಅನಧಿಕೃತವಾಗುವಂತೆ ಮಾಡಿ ಕೋಲ್ಡ್ ಸ್ಟೋರೇಜ್‍ನಲ್ಲಿ ಇಡಿಸಿದವರು ಸಿದ್ರಾಮಣ್ಣ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರಾದ ನಳಿನ್‍ಕುಮಾರ್ ಕಟೀಲ್ ಅವರು ಆರೋಪಿಸಿದರು.

ಮಲ್ಲೇಶ್ವರದ ರಾಜ್ಯ ಕಾರ್ಯಾಲಯದಲ್ಲಿ ಇಂದು ನಡೆದ ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಸಭೆಯಲ್ಲಿ ಮಾತನಾಡಿದ ಅವರು, ಸಿದ್ರಾಮಣ್ಣ ಇದ್ದಾಗ ಜಾತಿ ಜನಗಣತಿಗಾಗಿ ಕಾಂತರಾಜು ಆಯೋಗ ರಚಿಸಲಾಯಿತು. ಅಲ್ಲದೆ ವರದಿ ಪಡೆದಿದ್ದು, ಆ ವರದಿಗೆ ಕಾರ್ಯದರ್ಶಿಗಳ ಸಹಿಯೇ ಇಲ್ಲವೆಂದು ಹಿಂದುಳಿದ ವರ್ಗಗಳ ಆಯೋಗದ ಈಗಿನ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ ಎಂದು ವಿವರ ನೀಡಿದರು.

ಇವತ್ತು ಕಾಂಗ್ರೆಸ್ ಪಕ್ಷದವರು ಹಿಂದುಳಿದ ವರ್ಗದವರ ಬಗ್ಗೆ ಕಣ್ಣೀರು ಹಾಕುತ್ತಾರೆ. ಅಹಿಂದ ಚಳವಳಿಯನ್ನು ಪ್ರಾರಂಭಿಸಿದವರು ಸಿದ್ರಾಮಣ್ಣ. ಮುಖ್ಯಮಂತ್ರಿ ಆದಮೇಲೆ ಆ ಎಲ್ಲ ಸಮುದಾಯಗಳನ್ನು ಹಿಂದೆ ಇಟ್ಟರು. ಅಲ್ಲದೆ ಹಿಂದುಳಿದ ವರ್ಗಗಳ ಯಾವುದೇ ಸಮುದಾಯಕ್ಕೂ ಅವರು ನ್ಯಾಯ ಕೊಡಲಿಲ್ಲ ಎಂದು ಟೀಕಿಸಿದರು.

ಮೊದಲಿಗೆ ದೇವೇಗೌಡರನ್ನು ಗುರುಗಳು ಎಂದು ಹೇಳಿ ಬಳಿಕ ಅವರನ್ನು ತುಳಿದರು. ಅಹಿಂದ ಎಂದು ಹೇಳಿ ಬಳಿಕ ಅದನ್ನೂ ಮುಗಿಸಿದರು. ಕನಕ ಕ್ಷೇತ್ರದ ಅಭಿವೃದ್ಧಿಗೆ ಯಡಿಯೂರಪ್ಪ ಅವರು ಕಾರಣಕರ್ತರು ಎಂದರು. ಕಾಂಗ್ರೆಸ್‍ನವರು ಒಡೆದು ಆಳುವ ನೀತಿ ಅನುಸರಿಸಿದರು. ಲಿಂಗಾಯತ-ವೀರಶೈವರನ್ನು ಒಡೆಯಲು ಮುಂದಾದರು. ಉಡುಪಿಯಲ್ಲಿ ಗೋಪುರ, ದೇವಸ್ಥಾನ ಒಡೆಯಲು ಹೊರಟರು. ಮುಸಲ್ಮಾನರಿಗೆ ಬೇಡದ ಟಿಪ್ಪು ಜಯಂತಿ ಮಾಡಿ ಹಿಂದೂ-ಮುಸ್ಲಿಮರ ನಡುವೆ ಭೇದಭಾವ ತಂದರು ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗಗಳ ಬಗ್ಗೆ ಕಣ್ಣೀರು ಹಾಕಿ ಮತ ಪಡೆದ ಕಾಂಗ್ರೆಸ್ ಆ ವರ್ಗಕ್ಕೆ ಅನ್ಯಾಯ ಮಾಡಿದೆ. ಆ ಸಮುದಾಯಗಳನ್ನು ಮೆಟ್ಟಿ ಹಾಕುವ ಕೆಲಸ ಮಾಡಿದೆ. ಬಿಜೆಪಿ ಈಗ ಇರುವ ಸ್ಥಾನಕ್ಕಿಂತ ಹೆಚ್ಚು ಪ್ರಮಾಣವನ್ನು ಹಿಂದುಳಿದ ವರ್ಗಕ್ಕೆ ಕೊಡಲಿದೆ ಎಂದು ನುಡಿದರು.
ನಿಗಮ ಮಂಡಳಿಗಳಲ್ಲೂ ಬಾಕಿ ಉಳಿದ ಸಣ್ಣ ಸಮುದಾಯಗಳಿಗೆ ಅವಕಾಶ ಮಾಡಿ ಕೊಡಲಿದ್ದೇವೆ. ಹಿಂದುಳಿದ ವರ್ಗದ ಶಾಂತಾರಾಮ ಸಿದ್ದಿ, ಅಶೋಕ ಗಸ್ತಿ ಅವರಂಥವರಿಗೆ ಅವಕಾಶ ಮಾಡಿಕೊಟ್ಟ ಪಕ್ಷ ಬಿಜೆಪಿ ಎಂದು ತಿಳಿಸಿದರು. ಕಾಂಗ್ರೆಸ್-ಜೆಡಿಎಸ್‍ನಲ್ಲಿ ಪೇಮೆಂಟ್ ಸೀಟಿದೆ. ಇಲ್ಲಿ ಹಾಗಲ್ಲ ಎಂದರು.

ಬಿಜೆಪಿ ರಾಜ್ಯದಾದ್ಯಂತ ಕೈಗೊಂಡ ಸಂಘಟನಾತ್ಮಕ ಪ್ರವಾಸ ಯಶಸ್ವಿಯಾಗಿದೆ. ಅಲ್ಲಿ ಪಡೆದ ವರದಿ ಪ್ರಕಾರ ಯಾವುದೇ ಚುನಾವಣೆ ಬಂದರೂ ಅತಿ ಹೆಚ್ಚು ಜನರ ಆಕರ್ಷಣೆ ಇರುವ ಪಕ್ಷ ಬಿಜೆಪಿ ಎಂದು ಮಾಹಿತಿ ಲಭಿಸಿದೆ. ಎಸ್‍ಸಿ, ಎಸ್‍ಟಿ ಸೇರಿ ಹಿಂದುಳಿದ ವರ್ಗಗಳ ಅತಿ ಹೆಚ್ಚು ಜನರು ಬಿಜೆಪಿ ಕಡೆ ಬರುತ್ತಿದ್ದಾರೆ. ನರೇಂದ್ರ ಮೋದಿ-ಬೊಮ್ಮಾಯಿ ಅವರ ಆಡಳಿತವನ್ನು ಗಮನಿಸಿ ಎಲ್ಲ ಸಮುದಾಯಗಳು ಬಿಜೆಪಿಯತ್ತ ಆಕರ್ಷಿತರಾಗಿದ್ದಾರೆ ಎಂದರು.

ಹಿಂದುಳಿದ ವರ್ಗದ ಯಶಸ್ವಿ ಪ್ರಧಾನಮಂತ್ರಿಯನ್ನು ಬಿಜೆಪಿ ದೇಶಕ್ಕೆ ಕೊಟ್ಟಿದೆ. 56ಕ್ಕೂ ಹೆಚ್ಚು ದಲಿತರು, ಹಿಂದುಳಿದ ವರ್ಗದವರನ್ನು ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ಮೋದಿಯವರು ತಮ್ಮ ಸಚಿವ ಸಂಪುಟದಲ್ಲಿ ಸೇರ್ಪಡೆಗೊಳಿಸಿದ್ದಾರೆ. ಹಿಂದುಳಿದ ವರ್ಗದ ಆಯೋಗ ರಚಿಸಿದ್ದು, ಹಿಂದುಳಿದ ವರ್ಗಕ್ಕೆ ಆದ್ಯತೆ ಕೊಡಲಾಗಿದೆ ಎಂದು ವಿವರಿಸಿದರು.

ಸಮಾಜ ಕಲ್ಯಾಣ ಇಲಾಖೆಗೆ 9,389 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ಕೊಡಲಾಗಿದೆ. 2021-22ರಲ್ಲಿ ಮತ್ತೆ 65 ಕೋಟಿ ನೀಡಲಾಗಿದೆ. ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳ ಅಭಿವೃದ್ಧಿಗೆ 57 ಕೋಟಿ ರೂಪಾಯಿ ನೀಡಿದ್ದೇವೆ. ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ 10 ಕೋಟಿ, ಉಪ್ಪಾರ ಜನಾಂಗದ ಅಭಿವೃದ್ಧಿಗೆ 6.5 ಕೋಟಿ ಕೊಟ್ಟಿದ್ದು, ನಾರಾಯಣ ಗುರುಗಳ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಕೆಲಸವನ್ನು ಬಿಜೆಪಿ ಸರಕಾರ ಮಾಡಿದೆ ಎಂದು ತಿಳಿಸಿದರು.

ಬಿಜೆಪಿ ಸರ್ವಸ್ಪರ್ಶಿ ಮತ್ತು ಸರ್ವವ್ಯಾಪಿಯಾಗಿ ಬೆಳೆದಿದೆ. ಹೆಚ್ಚು ಜವಾಬ್ದಾರಿ ನೀಡುವ ದೃಷ್ಟಿಯಿಂದ ಪಂಚರತ್ನ ಕಮಿಟಿ ರಚಿಸಲಾಗುತ್ತಿದೆ. ಪೇಜ್ ಕಮಿಟಿಗಳನ್ನು ಯಶಸ್ವಿಯಾಗಿ ರಚಿಸಲಾಗುತ್ತಿದೆ ಎಂದು ವಿವರಿಸಿದರು.

2023ರ ಚುನಾವಣೆಯಲ್ಲಿ 150 ಪ್ಲಸ್ ಗುರಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ನೀಡಿದ್ದು, ಆನಿಟ್ಟಿನಲ್ಲಿ ಸಂಘಟನಾತ್ಮಕವಾಗಿ ನಡೆಯುತ್ತಿದ್ದೇವೆ. ಹಿಂದುಳಿದವರ ಮೋರ್ಚಾವು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾಣಾ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ರಾಜ್ಯದ ಸಚಿವರಾದ ಎನ್.ಮುನಿರತ್ನ, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷರಾದ ನೆ.ಲ. ನರೇಂದ್ರಬಾಬು ಅವರು ಸಭೆಯಲ್ಲಿ ಭಾಗವಹಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News