ಹೊಟ್ಟೆಗೆ‌ ಗತಿಯಿಲ್ಲದ ಸ್ಥಿತಿ ಬಂದರೆ‌ ಶ್ರೀಲಂಕಾದ ದುರಂತ ಭಾರತದಲ್ಲೂ ಆಗಬಹುದು: ದಿನೇಶ್ ಗುಂಡೂರಾವ್

Update: 2022-05-13 09:18 GMT

ಬೆಂಗಳೂರು, ಮೇ 13: ಮೋದಿಯವರ ಆಡಳಿತದಲ್ಲಿ ಹಣದುಬ್ಬರ 7.79 ಕ್ಕೆ ಏರಿ 8 ವರ್ಷದಲ್ಲಿ ಗರಿಷ್ಠ ಸಾಧನೆ ಮಾಡಿದೆ. ಹಸಿವಿನ ಸೂಚ್ಯಂಕದಲ್ಲಿ ಭಾರತಕ್ಕೆ 101ನೇ ಸ್ಥಾನ. ಬಡತನ ಸೂಚ್ಯಂಕದಲ್ಲಿ 66 ನೇ ಸ್ಥಾನ. ನಿರುದ್ಯೋಗದ ದರ 7.83% ಏರಿಕೆ. ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ.‌ ಪೆಟ್ರೋಲ್ 113,ಡೀಸೆಲ್ 96. ಅಡುಗೆ ಎಣ್ಣೆ ರೂ.85 ಗಳಿಂದ ರೂ.205. ಇದಪ್ಪಾ ಅಚ್ಛೆದಿನ್!  ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾಬ್ ಟೀಕಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, 8 ವರ್ಷಗಳ ಹಿಂದೆ ಸಿಲಿಂಡರ್ ಬೆಲೆ 400 ಇದ್ದಾಗ 'ದುಬಾರಿ ಕಾಂಗ್ರೆಸ್ ಸಾಕು-ಜನಪರ ಬಿಜೆಪಿ ಬೇಕು' ಎಂದು ಬಿಜೆಪಿಯವರು ಬೀದಿ ಬೀದಿಯಲ್ಲಿ ಬ್ಯಾನರ್ ಹಾಕಿದ್ದರು. ಈಗ ಸಿಲಿಂಡರ್ ರೂ.1,000 ದಾಟಿದೆ. ಅಕ್ಕಿ,ಗೋಧಿ ಹಿಟ್ಟು, ಸಾಬೂನು, ಟೂತ್ ಪೇಸ್ಟ್ ಜನರ ಕೈಗೆಟುಕದಂತಾಗಿದೆ. ಈಗ ಬಿಜೆಪಿಯವರಿಗೆ 'ದುಬಾರಿ ಬಿಜೆಪಿ ಸಾಕು' ಎಂದು ಬ್ಯಾನರ್ ಹಾಕಿಸುವ ಧಮ್ ಇದೆಯೆ.? ಎಂದು ಸವಾಲು ಹಾಕಿದ್ದಾರೆ.

ಆರ್ಥಿಕ ಶಿಸ್ತಿಲ್ಲದ ಮೋದಿಯವರ ಆಡಳಿತದಿಂದ‌ ದೇಶದ ಸಾಮಾನ್ಯ ವರ್ಗ ಬದುಕಲು ಹೋರಾಟ ನಡೆಸಬೇಕಾಗಿದೆ. ಮೋದಿಯವರು ದೇಶದ ನೈಜ ಸಮಸ್ಯೆಗಳನ್ನು ಮರೆಮಾಚಲು ಧರ್ಮ‌, ದೇವರು ಎಂಬ ಅಸ್ತ್ರ ಪ್ರಯೋಗಿಸುತ್ತಿದ್ದಾರೆ.‌ ಆದರೆ ಧರ್ಮ ಜನರ ಹೊಟ್ಟೆ ತುಂಬಿಸುವುದಿಲ್ಲ.‌ ಜನರ ಹೊಟ್ಟೆಗೆ‌ ಗತಿಯಿಲ್ಲದ ಸ್ಥಿತಿ ಬಂದರೆ‌ ಶ್ರೀಲಂಕಾದ ದುರಂತ ಭಾರತದಲ್ಲೂ ಆಗಬಹುದು ಎಂದವರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News