ಪಿಎಸ್ಸೈ ನೇಮಕಾತಿ ಅಕ್ರಮ | ಸಿಐಡಿ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಸಲಿ: ಪ್ರಿಯಾಂಕ್ ಖರ್ಗೆ ಒತ್ತಾಯ
ಕಲಬುರಗಿ, ಮೇ 13: ಪಿಎಸ್ಸೈ ನೇಮಕಾತಿ ಹಗರಣ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಸಬೇಕು, ಕೇವಲ ಕಲಬುರಗಿಗೆ ಮಾತ್ರ ಸೀಮಿತಗೊಳಿಸಿ ಮುಚ್ಚಿಹಾಕಬಾರದು ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಲಬುರಗಿ ಹೊರತುಪಡಿಸಿಯೂ ರಾಜ್ಯದ ಬಹುತೇಕ ಕಡೆ ಹಗರಣ ನಡೆದಿದೆ ಬೇರೆ ಕಡೆ ಹಗರಣಗಳ ಕುರಿತು ತನಿಖೆ ನಡೆಸುವುದು ಯಾವಾಗ? ತನಿಖೆ ನಡೆದು ಅಕ್ರಮದಲ್ಲಿ ಭಾಗಿಯಾದವರು ಹೆಸರು ಬಹಿರಂಗಗೊಂಡರೆ ಸರಕಾರ ಬಿದ್ದು ಹೋಗುತ್ತಿದೆಯಾ ಎನ್ನುವುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದರು.
ಸಿಐಡಿ ನೋಟಿಸ್ ನೀಡಿರುವುದನ್ನ ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಶಾಸಕರು, ನೋಟಿಸ್ ಗೆ ಈಗಾಗಲೇ ಉತ್ತರ ನೀಡಿದ್ದೇನೆ. ನಾನು ಹಿಟ್ ಆ್ಯಂಡ್ ರನ್ ಮಾಡುತ್ತಿಲ್ಲ. ನನಗೆ ಮೂರು ನೋಟಿಸ್ ನೀಡುವ ಸಿಐಡಿ, ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಯಾಕೆ ನೋಟಿಸ್ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿ ಸರಕಾರ ತರಾತುರಿಯಲ್ಲಿ ಮತಾಂತರ ಕಾಯ್ದೆ ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಆರೆಸ್ಸೆಸ್ ಬೇಡಿಕೆಗಳನ್ನು ಜಾರಿಗೆ ತರುವುದೇ ಸರಕಾರದ ಉದ್ದೇಶವಾಗಿದೆ ಎಂದು ಇದರಿಂದ ತಿಳಿಯುತ್ತದೆ. ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿರುವ ಸರಕಾರ ಇಂತಹ ವಿಚಾರಗಳನ್ನು ಹರಿಬಿಡುತ್ತದೆ. ಅಝಾನ್ ವಿಚಾರದಲ್ಲಿ ಸುಪ್ರಿಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಕೋರ್ಟ್ ಆದೇಶ ಮಸೀದಿ, ಮಂದಿರ ಹಾಗೂ ಚರ್ಚುಗಳಿಗೆ ಅನ್ವಯವಾಗುತ್ತದೆ. ಆದರೆ ಸರಕಾರ ಕೋರ್ಟ್ ಆದೇಶವನ್ನು ಪಾಲನೆ ಮಾಡಲು ಯಾಕೆ ಕಷ್ಟಪಡುತ್ತಿದೆ ? ಎಂದು ಪ್ರಿಯಾಂಕ್ ಪ್ರಶ್ನಿಸಿದರು.
ಸಚಿವ ಅಶ್ವತ್ಥ ನಾರಾಯಣ ಹಾಗೂ ಎಂ.ಬಿ.ಪಾಟೀಲ್ ಭೇಟಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ಆ ಕುರಿತು ತನಗೆ ಹೆಚ್ಚಿನ ಮಾಹಿತಿ ಇಲ್ಲ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ ಎಂದರು.
ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಟ್ವೀಟ್ ಮಾಡಿದ್ದಕ್ಕೆ ಬಿಜೆಪಿ ಟಾಂಗ್ ನೀಡಿದ ಕುರಿತು ಪ್ರಶ್ನಿಸಿದಾಗ, ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ ಅವರವರ ಅಭಿಪ್ರಾಯ ಹೇಳುತ್ತಾರೆ. ಯಾವುದೇ ರಾಜಕೀಯ ಪಕ್ಷದಲ್ಲಿ ಸಣ್ಣಪುಟ್ಟ ವಿಚಾರಗಳು ಬಂದು ಹೋಗುತ್ತವೆ. ಬಿಜೆಪಿಯವರು ಮೊದಲು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ತೆಗೆಯಲಿ, ಆಮೇಲೆ ನಮ್ಮ ಪಕ್ಷದ ಬಗ್ಗೆ ಮಾತನಾಡಲಿ. ಸಿಎಂ ಆಗಬೇಕಾದರೆ ರೂ 2500 ಕೋಟಿ ಕೊಡಿ ಎಂದು ಅವರಿಗೆ ಯಾರೋ ಹೇಳಿದ್ದನ್ನ ಬಹಿರಂಗಪಡಿಸಿದ್ದಾರೆ ಅವರ ಮೇಲೆ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಯಾವ ಕ್ರಮ ಕೈಗೊಂಡಿದ್ದಾರೆ ?ಎಂದು ಪ್ರಶ್ನಿಸಿದರು.
ಬಿಜೆಪಿ ಸರಕಾರದಲ್ಲಿ ಮಂತ್ರಿಯಾಗಬೇಕಾದರೆ ಸಿಡಿ ತಯಾರಿಸಬೇಕು ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ. ಮಂತ್ರಿಮಂಡಲ ವಿಸ್ತರಣೆಯ ಈ ಸಂದರ್ಭದಲ್ಲಿ ಯಾರ ಸಿಡಿ ಹೊರಗೆ ಬರಲಿದೆ ಎನ್ನುವುದು ತಮಗೆ ತಿಳಿದಿಲ್ಲ ಎಂದರು.