ಗಂಗಾವತಿ: ಬಿಲ್ ಪಾವತಿ ಕುರಿತು ಪ್ರಧಾನಿಗೆ ಪತ್ರ ಬರೆದಿದ್ದ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲು

Update: 2022-05-13 13:32 GMT
ಯರಿಸ್ವಾಮಿ- ಪ್ರಧಾನಿಗೆ ಪತ್ರ ಬರೆದ ಗುತ್ತಿಗೆದಾರ

ಕೊಪ್ಪಳ: ಉದ್ಯೋಗ ಖಾತ್ರಿ ಯೋಜನೆಯಡಿ ಸಾಮಗ್ರಿ ಪೂರೈಸಿದ ಬಾಕಿ ಬಿಲ್ ಪಾವತಿಸುತ್ತಿಲ್ಲ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಗುತ್ತಿಗೆದಾರನ ವಿರುದ್ಧ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. 

ಪ್ರಧಾನಿಗೆ ಪತ್ರ ಬರೆದಿರುವ ಗುತ್ತಿಗೆದಾರ ಯರ್ರಿಸ್ವಾಮಿ ವಿರುದ್ಧ ಗಂಗಾವತಿ ಗ್ರಾಮಾಂತರ ಪೊಲೀಸರು  IPC 406 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಕುರಿತು ಯರಿಸ್ವಾಮಿ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. 

ಬಾಕಿ ಇರುವ ತನ್ನ ಮೊತ್ತದ ಬಿಡುಗಡೆಗೆ ಸರ್ಕಾರಿ ಅಧಿಕಾರಿಗಳು ಕಮಿಷನ್‌ಗೆ ಒತ್ತಾಯಿಸುತ್ತಿದ್ದಾರೆ ಎಂದು ದೂರಿದರು.

'ಮುಷ್ಟೂರು ಗ್ರಾ.ಪಂನಲ್ಲಿ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮುಖ್ಯಮಂತ್ರಿ, ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೂ ದೂರು ಕೊಟ್ಟಿದ್ದೇನೆ.  ಈ ಸಂಬಂಧ  ಪ್ರಧಾನಿ ಮೋದಿಯವರಿಗೂ ಪತ್ರ ಬರೆದಿದ್ದೇನೆ. ನನಗೆ ನ್ಯಾಯ ಕೊಡುವುದನ್ನು ಬಿಟ್ಟು ನನ್ನ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ. ಅವರೇ ಕಮಿಷನ್ ಕೊಡುವಂತೆ ಒತ್ತಾಯಿಸಿದ್ದಾರೆ. ಕಮಿಷನ್ ಪೇಮೆಂಟ್  ಕೊಡಲ್ಲ ಅಂದರೆ ಕೆಲಸ ಮಾಡಲು ಬಿಡಲ್ಲ, ಸಾಮಗ್ರಿ ಪೂರೈಕೆಗೂ ತೊಂದರೆ ಮಾಡ್ತೀವಿ ಅಂತೆಲ್ಲ ಹೇಳಿದ್ದಾರೆ. ಗ್ರಾಪಂ ಅಧ್ಯಕ್ಷರೇ ಫೋನ್ ಕರೆ ಮಾಡಿ ಹೇಳಿದ್ದ ದಾಖಲೆಗಳನ್ನು ಎಲ್ಲ ಮಾಧ್ಯಮಗಳಿಗೂ ಕೊಟ್ಟಿದ್ದೇನೆ. ಹೀಗಿದ್ದರೂ ಅವರ ವಿರುದ್ಧ ಪ್ರಕರಣ ದಾಖಲಿಸದೆ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನನಗೆ ನ್ಯಾಯ ಕೊಡಲು ಯಾರೂ ಇಲ್ಲ' ಎಂದು ಅಳಲು ತೋಡಿಕೊಂಡಿದ್ದಾರೆ. 

ಶಾಸಕ ಬಸವರಾಜ ದಢೆಸೂಗೂರು ಹಾಗೂ ಜಿ.ಪಂ ಸಿಇಒ ಅವರ ಸೂಚನೆ ಮೇರೆಗೆ ತಾ.ಪಂ ಇಒ ಅವರು ನನ್ನ ವಿರುದ್ಧ ದೂರು ನೀಡಿದ್ದಾರೆ ಎಂದು ಯರಿಸ್ವಾಮಿ ಆರೋಪಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News