27.25 ಎಕರೆ ಭೂ ಕಬಳಿಕೆ ಆರೋಪ: ಸಚಿವ ಶ್ರೀರಾಮುಲು ರಾಜೀನಾಮೆ ನೀಡಲು ಎಸ್.ಆರ್.ಹಿರೇಮಠ ಆಗ್ರಹ

Update: 2022-05-13 14:27 GMT

ಹುಬ್ಬಳ್ಳಿ, ಮೇ 13: ಅಧಿಕಾರಿಗಳನ್ನು ಬಳಸಿಕೊಂಡು, ಸಚಿವ ಬಿ.ಶ್ರೀರಾಮುಲು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಬೆಲೆ ಬಾಳುವ ಭೂಮಿಯನ್ನು ಕಬಳಿಸಿದ್ದಾರೆ. ಹಾಗಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರವನ್ನು ಮಾಡಿದ ಅವರು ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಆಗ್ರಹಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ಪ್ರಭಾವಿ ಸಚಿವ ಹಾಗೂ ಚಿತ್ರದುರ್ಗ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು 27.25 ಎಕರೆ ಭೂಮಿಯನ್ನು ಕಬಳಿಸಿದ್ದಾರೆ. ಈ ಬಗ್ಗೆ ಮಹತ್ವದ ದಾಖಲೆಗಳನ್ನು ನ್ಯಾಷನಲ್ ಕಮಿಟಿ ಫಾರ್ ಪ್ರೊಟೆಕ್ಷನ್ ಆಫ್ ನ್ಯಾಚುರಲ್ ರಿಸೋರಸಸ್(ಎನ್‍ಸಿಪಿಎನ್‍ಆರ್), ಜನ ಸಂಗ್ರಾಮ ಪರಿಷತ್ ಹಾಗೂ ಸಮಾನ ಮನಸ್ಕ ಸಂಘಟನೆಗಳು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿವೆ. ಹಾಗಾಗಿ ನೈತಿಕ ಹೊಣೆಹೊತ್ತು ಏಕೆ ರಾಜೀನಾಮೆ ನೀಡಬಾರದು ಎಂದು ಅವರು  ಪ್ರಶ್ನಿಸಿದರು.

ಗಣಿ ಬಾಧಿತ ವಲಯ ಸಮಗ್ರ ಪರಿಸರ ಅಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸಲು ಹಾಗೂ ಉಸ್ತುವಾರಿಯಾಗಿ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಬಿ.ಸುದರ್ಶನ ರೆಡ್ಡಿ ಅವರನ್ನು ನೇಮಕ ಮಾಡಲು ಸುಪ್ರೀಂಕೋರ್ಟ್ ಏ.21ರಂದು ಆದೇಶ ನೀಡಿದೆ. ಇದನ್ನು ಸಮಾಜ ಪರಿವರ್ತನಾ ಸಮುದಾಯ ಸ್ವಾಗತಿಸುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News