×
Ad

ಕಳೆ ಕಿತ್ತುಕೊಂಡು ಹೋದರೆ ಬೆಳೆ ಸಮೃದ್ಧಿ: ಪಕ್ಷ ತೊರೆಯುವವರ ಬಗ್ಗೆ ಸಿಎಂ ಇಬ್ರಾಹೀಂ ಲೇವಡಿ

Update: 2022-05-13 20:37 IST

ಬೆಂಗಳೂರು, ಮೇ 13: ‘ಜೆಡಿಎಸ್ ಪಕ್ಷದಿಂದ ಒಬ್ಬೊಬ್ಬರನ್ನೇ ಕೀಳುತ್ತೇವೆಂದು ಕಾಂಗ್ರೆಸ್ ಹಾಗೂ ಬಿಜೆಪಿಯವರು ಹೇಳುತ್ತಾರೆ. ಆದರೆ, ನಮ್ಮದು ರೈತರ ಪಕ್ಷ. ನಮ್ಮ ಕಡೆ ರೈತರು ಕಳೆ ಕಿತ್ತುಕೊಂಡು ಹೋದರೆ ಬೆಳೆ ಸಮೃದ್ಧಿ ಆಗುತ್ತದೆ ಎಂದು ನಮಗೆ ಗೊತ್ತು. ಹೀಗಾಗಿ ಕಳೆ ಹೋಗಲಿ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹೀಂ ತಮ್ಮದೇ ದಾಟಿಯಲ್ಲೇ ಪಕ್ಷ ತೊರೆಯುವವರ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ನಗರದ ಹೊರ ವಲಯದಲ್ಲಿ ಏರ್ಪಡಿಸಿದ್ದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರಕಾರ ಎಲ್‍ಐಸಿ, ರೈಲ್ವೆಯಿಂದ ಎಲ್ಲವನ್ನು ಮಾರಾಟ ಮಾಡುತ್ತಿದೆ. ಆದರೆ, ಎಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ಯಾವುದನ್ನು ಮಾರಾಟ ಮಾಡಲಿಲ್ಲ. 90 ವರ್ಷವಾದರೂ ದೇವೇಗೌಡ ಅವರ ಮೇಲೆ ಒಂದೂ ಅಪವಾದವೂ ಇಲ್ಲ' ಎಂದು ಹೇಳಿದರು.

‘ರಾಜ್ಯದ ನೀರಾವರಿ ಯೋಜನೆಗಳನ್ನು ಐದು ವರ್ಷದಲ್ಲಿ ಮಾಡುತ್ತೇವೆಂಬ ಸಂಕಲ್ಪ ಕಾರಣಕ್ಕಾಗಿ ಸಮಾವೇಶ ಮಾಡುತ್ತಿದ್ದೇವೆ. ನಾವು ಮೇಕೆ ಅಲ್ಲ ಹುಲಿ ದಾಟಿಸುತ್ತೇವೆ. ಅಶ್ವಮೇಧಯಾಗ ಮಾಡಿದ್ದೇವೆ. ಕುದುರೆಯನ್ನು ಬಿಟ್ಟಿದ್ದೇವೆ ಎಂದು ಅವರು, ‘ಬಿಜೆಪಿಯವರು ಗುಜರಾತ್ ಮಾದರಿ ಎನ್ನುತ್ತಾರೆ. ಆದರೆ, ಗುಜರಾತ್‍ನವರು ರಾಜ್ಯದಲ್ಲಿ ಪಾನಿಪುರಿ ಮಾರಾಟ ಮಾಡುತ್ತಿದ್ದಾರೆ' ಎಂದು ಟೀಕಿಸಿದರು.

‘ಜೆಡಿಎಸ್ ಪಕ್ಷದಲ್ಲಿ ಕುಟುಂಬ ರಾಜಕಾರಣ ಎಂಬ ಆರೋಪವಿದೆ. ಆದರೆ, ಇಲ್ಲಿ ಕುಟುಂಬ ರಾಜಕಾರಣವಿಲ್ಲ, ಎಲ್ಲರಿಗೂ ಸಮಾನ ಅವಕಾಶಗಳಿವೆ. ಆದರೆ, ಕಾಂಗ್ರೆಸ್‍ನಲ್ಲಿ ಸಿದ್ಧರಾಮಯ್ಯ ಸದಾ ಸೋನಿಯಮ್ಮನಿಗೆ ಉಧೋ ಉಧೋ ಎನ್ನುತ್ತಿದ್ದಾರೆ. ಜೆಡಿಎಸ್‍ನಲ್ಲಿ ಅಂತಹ ಸ್ಥಿತಿಯಿಲ್ಲ. ಹಿಂದೆ ಕಾಂಗ್ರೆಸ್ ಪಕ್ಷದ ಆಳ್ವಿಕೆಯ ಅವಧಿಯಲ್ಲಿ ರಾಜ್ಯ ನಾಯಕರನ್ನು ಬೆಳೆಯಲು ಬಿಡಲಿಲ್ಲ' ಎಂದು ಇಬ್ರಾಹೀಂ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News