×
Ad

ಸೋಮವಾರಪೇಟೆ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯೋಧ ಮೃತ್ಯು

Update: 2022-05-13 21:17 IST

ಸೋಮವಾರಪೇಟೆ:  ಬೈಕ್ ಮತ್ತು ಸ್ಕೂಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಸಿಆರ್‍ಪಿಎಫ್ ಯೋಧ ಕೆ.ಬಿ.ಡಾಲು(36) ಶುಕ್ರವಾರ ಸಂಜೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಯಡವಾರೆ ಗ್ರಾಮದ ಕಲ್ಲುಗದ್ದೆ ಮನೆ ದಿ.ಬಾಲಕೃಷ್ಣ ಎಂಬುವರ ಪುತ್ರ  ಯೋಧ ಡಾಲು, 13 ವರ್ಷದಿಂದ ಸಿ.ಆರ್‍ಪಿ.ಎಫ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹಾಲಿ ಜಮ್ಮಕಾಶ್ಮಿರದಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾಲು, ಮೂರು ದಿನಗಳ ಹಿಂದೆ ರಜೆಯಲ್ಲಿ ಮನೆಗೆ ಬಂದಿದ್ದರು

ಶುಕ್ರವಾರ ಸೋಮವಾರಪೇಟೆ ಪಟ್ಟಣಕ್ಕೆ ಬಂದು ಬ್ಯಾಂಕ್ ವ್ಯವಹಾರ ಮುಗಿಸಿ, ಸ್ಕೂಟರ್ ನ ಲ್ಲಿ ವಾಪಾಸ್ಸು ಮನೆಗೆ ತೆರಳುತ್ತಿದ್ದ ಸಂದರ್ಭ ನಗರೂರು ಸಮೀಪದ ಅಪಘಾತ ಸಂಭವಿಸಿತ್ತು. ರಸ್ತೆ ಮೇಲೆ ಬಿದ್ದ ಡಾಲು ಹೆಲ್ಮೆಟ್ ಧರಿಸದ ಕಾರಣ ತಲೆಯ ಹಿಂಭಾಗಕ್ಕೆ ಬಲವಾದ ಪೆಟ್ಟು ಬಿದ್ದು, ರಕ್ತಸ್ರಾವವಾಗಿತ್ತು. ಸೋಮವಾರಪೇಟೆ ಸರ್ಕಾರಿ  ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ನಂತರ ಮೈಸೂರಿಗೆ ಕರೆದೊಯ್ಯಲಾಗಿತ್ತು. ಇನ್ನೊಂದು ಬೈಕ್‍ನಲ್ಲಿದ್ದ ಕಾಗಡಿಕಟ್ಟೆ ಗ್ರಾಮದ ಮನೋಜ್‍ಭಟ್ ಹಾಗು ಪೈಂಟರ್ ಆಸೀಪ್ ತೀವ್ರ ಗಾಯಗೊಂಡು ಮಡಿಕೇರಿ ಮತ್ತು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಡ ಕೃಷಿಕ ಕುಟುಂಬದ ಇವರಿಗೆ ಯಡವಾರೆ ಗ್ರಾಮದಲ್ಲಿ ಮುಕ್ಕಾಲು ಎಕರೆ ಕೃಷಿ ಭೂಮಿಯಿದೆ. ಇವರ ಈರ್ವರು ಸಹೋದರಿಯರು ವಿವಾಹವಾಗಿದ್ದಾರೆ. ತಾಯಿ ನಾಗವೇಣಿ, ಪತ್ನಿ ರಾಜೇಶ್ವರಿ, ಏಳು ಮತ್ತು ಎರಡೂವರೆ ವರ್ಷದ ಇಬ್ಬರು ಪುತ್ರಿಯರಿದ್ದಾರೆ. ಕುಟುಂಬದ ಜವಾಬ್ದಾರಿ ಹೊತ್ತಿದ್ದ ಮಗನನ್ನು ಕಳೆದುಕೊಂಡ ತಾಯಿ ಅಕ್ರಂದನ ಮುಗಿಲುಮುಟ್ಟಿದೆ.

ಶನಿವಾರ ಯಡವಾರೆ ಗ್ರಾಮದಲ್ಲಿ ಸರ್ಕಾರಿ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News