ಹೈಕೋರ್ಟ್ ಸಿಜೆಯಾಗಿ ಜಸ್ವಂತ್ ಸಿಂಗ್ ನೇಮಕ ಸಾಧ್ಯತೆ

Update: 2022-05-13 17:44 GMT
photo credit- orissahighcourt.nic.in (ಜಸ್ವಂತ್ ಸಿಂಗ್)

ಬೆಂಗಳೂರು, ಮೇ 13: ರಾಜ್ಯ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿ ಒಡಿಶಾ ಹೈಕೋರ್ಟ್‍ನ ಹಿರಿಯ ನ್ಯಾಯಮೂರ್ತಿ ಜಸ್ವಂತ್ ಸಿಂಗ್ ಅವರು ನೇಮಕಗೊಳ್ಳಲಿದ್ದಾರೆ ಎನ್ನಲಾಗಿದೆ. 

ರಾಜ್ಯ ಹೈಕೋರ್ಟ್ ಹಾಲಿ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರು ಇದೇ ಜು.2ರಂದು ನಿವೃತ್ತಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಸ್ವಂತ್ ಸಿಂಗ್ ಅವರನ್ನು ಕರ್ನಾಟಕ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ನಿಯೋಜಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಹಿನ್ನೆಲೆ ಏನು: ನ್ಯಾ. ಜಸ್ವಂತ್ ಸಿಂಗ್ ಅವರು 1961ರ ಫೆಬ್ರವರಿ 23ರಂದು ಹರಿಯಾಣ ರಾಜ್ಯದ ರೋಹ್ಟಕ್ ಜಿಲ್ಲೆಯಲ್ಲಿ ಜನಿಸಿದರು. ಸ್ಥಳೀಯ ಓಕ್ ಗ್ರೋವ್, ಝರಿಪಾನಿ, ಮಸ್ಸೂರಿ ಮಾಡೆಲ್ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ 1980ರಲ್ಲಿ ಕಲಾ ವಿಷಯದಲ್ಲಿ ಪದವಿ ಪಡೆದಿದ್ದಾರೆ. 

ಬಳಿಕ ರೋಹ್ಟಕ್‍ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಿಂದ ಕಾನೂನು ಮತ್ತು ಎಂಬಿಎ ಪದವಿ ಪಡೆದು, 1986ರಲ್ಲಿ ವಕೀಲರಾಗಿ ಸೇವೆ ಆರಂಭಿಸಿದ್ದರು. ಆ ಬಳಿಕ ಸಿರ್ಸಾ ಜಿಲ್ಲಾ ನ್ಯಾಯಾಲಯದಲ್ಲಿ ಕೆಲ ಕಾಲ ವಕೀಲಿ ವೃತ್ತಿ ನಡೆಸಿದ್ದು, 1988ರಿಂದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.

ಹಲವು ವರ್ಷಗಳ ಕಾಲ ಹರಿಯಾಣದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿಯೂ ಸೇವೆ ಸಲ್ಲಿಸಿರುವ ನ್ಯಾ. ಜಸ್ವಂತ್ ಸಿಂಗ್ ಅವರು 2007ರ ಡಿಸೆಂಬರ್ 5ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2021ರ ಅಕ್ಟೋಬರ್ 8ರಿಂದ ಒಡಿಶಾ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಇವರನ್ನೀಗ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ನಿಯೋಜಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News