ನರೇಗಾ ಅನುಷ್ಠಾನದಲ್ಲಿ ಲೋಪದ ಆರೋಪ; ಯುವಕರ ವಲಸೆ ವ್ಯಾಪಕ

Update: 2022-05-14 02:31 GMT

ಧಾರವಾಡ: ಉತ್ತರ ಕರ್ನಾಟಕದಲ್ಲಿ ಮಹತ್ವಾಕಾಂಕ್ಷಿ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ಉಂಟಾಗಿರುವ ಲೋಪದಿಂದಾಗಿ ಉದ್ಯೋಗಾಕಾಂಕ್ಷಿ ಯುವಕರಿಗೆ ಉದ್ಯೋಗ ನಿರಾಕರಿಸಲಾ ಗುತ್ತಿದ್ದು, ಇಂಥ ಯುವಜನತೆ ನಗರ ಕೇಂದ್ರಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು times of india ವರದಿ ಮಾಡಿದೆ.

ಗ್ರಾಮಗಳಿಂದ ಜನತೆ ವಲಸೆ ಹೋಗುವುದನ್ನು ತಡೆದು, ಗ್ರಾಮೀಣ ಪ್ರದೇಶಗಳಲ್ಲೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ಮಾಡುವುದು ಯೋಜನೆಯ ಮುಖ್ಯ ಉದ್ದೇಶ. ಆದರೆ ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ ರಾಜ್ ಇಲಾಖೆಯ ಗೊಂದಲಕಾರಿ ಅಧಿಸೂಚನೆಗಳಿಂದಾಗಿ ಸ್ಥಳೀಯಮಟ್ಟದಲ್ಲಿ ಅಧಿಕಾರಿಗಳು, ಗ್ರಾಮೀಣ ಜನತೆಗೆ ಉದ್ಯೋಗ ನಿರಾಕರಿಸುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ ತಾಪಮಾನ 41-42 ಡಿಗ್ರ ಸೆಲ್ಷಿಯಸ್‍ಗೆ ಏರಿದ್ದು, ಸರ್ಕಾರದ ಅಧಿಸೂಚನೆಯ ಪ್ರಕಾರ ನೆತ್ತಿಸುಡುವ ಬಿಸಿಲಿನಲ್ಲೂ ಜನ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಈ ವರ್ಷದ ಜನವರಿಯಲ್ಲಿ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ, ಸಮುದಾಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು, ವೇತನಕ್ಕೆ ಅರ್ಹರಾಗಲು ಬೆಳಗ್ಗೆ 10 ಗಂಟೆಗೆ ಮತ್ತು ಮಧ್ಯಾಹ್ನ 2 ಗಂಟೆಗೆ ಫೋಟೊ ಕ್ಲಿಕ್ಕಿಸಿ ಎನ್‍ಎಂಎಂಎಸ್‍ ನಲ್ಲಿ ಅಪ್‍ಲೋಡ್ ಮಾಡಬೇಕಾಗುತ್ತದೆ.

ವಿಜಾಪುರ, ಬಾಗಲಕೋಟೆ, ಕಲ್ಬುರ್ಗಿ, ಬೀದರ್ ಮತ್ತು ಉತ್ತರ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಬೇಸಿಗೆಯಲ್ಲಿ ಸರ್ಕಾರಿ ಕಚೇರಿಗಳು ಕೂಡಾ ಬೆಳಗ್ಗಿನ ಅವಧಿಯಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತವೆ. ನರೇಗಾ ಕಾರ್ಮಿಕರು ಮುಂಜಾನೆ 6ರಿಂದ 10 ಗಂಟೆಯ ಅವಧಿಯಲ್ಲಿ ಕೆಲಸ ಮಾಡುತ್ತಾರೆ.

ಆದರೆ ಹೊಸ ಆದೇಶದ ಪ್ರಕಾರ ಎಪ್ರಿಲ್ 1ರಿಂದ ಕಡ್ಡಾಯವಾಗಿ ಸುಡುಬಿಸಿಲಿನಲ್ಲಿ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಹಲವು ಮಂದಿಗೆ ಸ್ಮಾರ್ಟ್‍ಫೋನ್ ಇಲ್ಲದಿರುವುದರಿಂದ ಮತ್ತು ಇಂಟರ್‍ನೆಟ್ ಲಭ್ಯತೆ ಇಲ್ಲದ ಕಾರಣ ವೇತನ ಪಡೆಯುವ ಅರ್ಹತೆ ಸಂಪಾದಿಸಲು ಫೋಟೊಗಳನ್ನು ಅಪ್‍ಲೋಡ್ ಮಾಡಲು ಸಂಜೆಯವರೆಗೂ ಕಾಯಬೇಕಾಗುತ್ತದೆ.

ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಜನತೆ ನರೇಗಾ ಹೊರತಾಗಿಯೂ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಅಧಿಕಾರಿಗಳು ಯಂತ್ರಗಳನ್ನು ಬಳಸಿ ಕೆಲಸ ಮಾಡಿಸಿ, ಬಡಜನತೆಯ ಖಾತೆಗಳಿಗೆ ವೇತನ ಪಾವತಿಸಿ ಮತ್ತೆ ಅವರಿಂದ ಹಣ ಮರಳಿ ಪಡೆಯುತ್ತಿದ್ದಾರೆ ಎನ್ನುವುದು ಜನರ ಆರೋಪ. ಆದರೆ ಇದನ್ನು ತಾಲೂಕು ಪಂಚಾಯ್ತಿ ಅಧಿಕಾರಿಗಳು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News