ಮೈಸೂರಿನಿಂದ 3 ವರ್ಷದ ಹಿಂದೆ ಅಪಹರಣಕ್ಕೀಡಾಗಿದ್ದ ನಾಟಿ ವೈದ್ಯ ಕೇರಳದಲ್ಲಿ ಕೊಲೆ

Update: 2022-05-14 08:18 GMT

ಮೈಸೂರು, ಮೇ 14: ಮೂರು ವರ್ಷಗಳ ಹಿಂದೆ ನಗರದ ಸರಸ್ವತಿಪುರಂ ಠಾಣಾ ವ್ಯಾಪ್ತಿಯ ಮನೆಯೊಂದರಿಂದ ಅಪಹರಣಕ್ಕೊಳಗಾಗಿದ್ದ ನಾಟಿ ವೈದ್ಯರೊಬ್ಬರು ಕೇರಳದಲ್ಲಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

ಸರಸ್ವತಿಪುರಂ ನಿವಾಸಿ ಶಾಬಾ ಶರೀಫ್ (60) ಎಂಬ ನಾಟಿ ವೈದ್ಯ ಕೊಲೆಯಾದವರು. ಇವರನ್ನು ಕೊಲೆ ಮಾಡಿದ ಆರೋಪಿಗಳು ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನದಿಗೆ ಎಸೆದಿದ್ದಾರೆ. ಈ ಸಂಬಂಧ ಕೇರಳ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ನಗರದ ಸರಸ್ವತಿಪುರಂ ನಿವಾಸಿಯಾಗಿದ್ದ ಶಾಬಾ ಶರೀಫ್ 2019ರ ಆಗಸ್ಟ್ ನಲ್ಲಿ ನಗರದ ಸರಸ್ವತಿಪುರಂನ ತನ್ನ ಮನೆಯಿಂದ ಅಪಹರಣಕ್ಕೊಳಗಾಗಿದ್ದರು. ಬಳಿಕ ಅವರು ಏನಾದರೂ ಎಂಬುದು ಇದುವರೆಗೂ ತಿಳಿದಿರಲಿಲ್ಲ. ಈ ನಡುವೆ ಇದೀಗ ಕೇರಳದ ಮಲ್ಲಪುರಂ ಜಿಲ್ಲೆಯಲ್ಲಿ ನಡೆದ ದರೋಡೆ ಪ್ರಕರಣವೊಂದನ್ನು ಭೇದಿಸಿದ ನೀಲಂಬೂರು ಪೊಲೀಸರು ಆರೋಪಿಗಳನ್ನು ತನಿಖೆಗೆ ಒಳಪಡಿಸಿದಾಗ ಶಾಬಾ ಶರೀಫ್ ಕೊಲೆ ಪ್ರಕರಣ ಬಯಲಾಗಿದೆ.

ಕಳೆದ ಎಪ್ರಿಲ್ 24ರಂದು ನೀಲಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಶೈಬೀನ್ ಅಶ್ರಫ್ ಎಂಬಾತನ ಮನೆಯಿಂದ ಏಳು ಲಕ್ಷ ರೂ. ಮೌಲ್ಯದ ನಗ-ನಗದು ಕಳವಾಗಿತ್ತು. ಈ ಸಂಬಂಧ ಶೈಬೀನ್ ಅಶ್ರಫ್  ನೀಲಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ತನಿಖೆಗೆ ಒಳಪಡಿಸಿದಾಗ ಮೈಸೂರಿನ‌ ನಾಟಿ ವೈದ್ಯ ಶಾಬಾ ಶರೀಫ್ ಕೊಲೆ ಪ್ರಕರಣ ಬಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಕಳವು ದೂರು ನೀಡಿದಾತನೇ ನಾಟಿ ವೈದ್ಯನ ಕೊಲೆ ಆರೋಪಿ!

ತನ್ನ ಮನೆಯಲ್ಲಿ 7 ಲಕ್ಷ ರೂ .ನಗದು ಹಾಗೂ ಚಿನ್ನಾಭರಣ ಕಳವಾಗಿದೆ ಎಂದು ದೂರು ನೀಡಿದ್ದ ಶೈಬೀನ್ ಅಶ್ರಫ್ ನೇ ನಾಟಿ ವೈದ್ಯ ಶಾಬಾ ಶರೀಫ್ ಕೊಲೆ ಆರೋಪಿ ಎಂಬುದನ್ನು ಕೇಳಿದ ಕೇರಳ ಪೊಲೀಸರು ಶಾಕ್ ಆಗಿದ್ದಾರೆ. ನಂತರ ಆರೂಪಿಗಳು ಪೆನ್ ಡ್ರೈವ್ ಒಂದನ್ನು ಪೊಲೀಸರಿಗೆ ನೀಡಿದರು. ಅದರಲ್ಲಿ ಶಾಬಾ ಶರೀಫ್ ರನ್ನು ಚಿತ್ರಹಿಂಸೆ ಕೊಲೆ ಮಾಡಿರುವ ದೃಶ್ಯಾವಳಿಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಔಷಧ ರಹಸ್ಯ ತಿಳಿಸುವಂತೆ ಚಿತ್ರಹಿಂಸೆ ನೀಡಿ ಹತ್ಯೆ

ಪ್ರಕರಣದ ಬಗ್ಗೆ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಪೈಲ್ಸ್ (ಮೂಲವ್ಯಾಧಿ) ರೋಗಕ್ಕೆ ಪಾರಂಪರಿಕ ಚಿಕಿತ್ಸೆ ನೀಡುತ್ತಿದ್ದ ಶಾಬಾ ಶರೀಫ್, ಇದರಲ್ಲಿ ಬಹಳ ಪರಿಣತಿ ಹೊಂದಿದ್ದರು. ಇವರ ಬಳಿಗೆ ಕೇರಳದಿಂದ ಬಹಳಷ್ಟು ಮಂದಿ ಚಿಕಿತ್ಸೆಗೆ ಬರುತ್ತಿದ್ದರು. ಈ ಹಿನ್ನೆಲೆಯಲ್ಲಿ ಔಷಧದ ರಹಸ್ಯ ತಿಳಿಯುವ ದುರುದ್ದೇಶದಿಂದ 2019ರ ಆಗಸ್ಟ್ ತಿಂಗಳಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ಕೇರಳ ಮೂಲದ ಯುವಕರು ಶಾಬಾ ಶರೀಫ್  ರನ್ನು ಬೇಟಿಯಾಗಿದ್ದಾರೆ. ನಮ್ಮ ಮನೆಯಲ್ಲಿ ಒಬ್ಬರಿಗೆ ಪೈಲ್ಸ್ ಕಾಯಿಲೆ ಇದೆ ಎಂದು ಹೇಳಿ ಚಿಕಿತ್ಸೆ ಮಾಡುವಂತೆ ಶರೀಫ್ ಅವರನ್ನು ಮನೆಯಿಂದ ಕರೆದೊಯ್ದು ಬಳಿಕ ಕಾರಿನಲ್ಲಿ ಅವರನ್ನು ಅಪಹರಿಸಲಾಗಿತ್ತು. ನಂತರ ಶರೀಫ್ ರನ್ನು ಆರೋಪಿ ನೀಲಂಬೂರಿನ ಶೈಬೀನ್ ಅಶ್ರಫ್ ಮನೆಗೆ ಕರೆದುಕೊಂಡು ಬರಲಾಗುತ್ತದೆ. ಅಲ್ಲಿ ಪೈಲ್ಸ್ ಚಿಕಿತ್ಸೆಯ ವಿಧಾನ ಹೇಳಿಕೊಡುವಂತೆ ಅವರಿಗೆ ಶೈಬೀನ್ ಅಶ್ರಫ್ ಒತ್ತಡ ಹೇರುತ್ತಾರೆ. ಆದರೆ ಪೂರ್ವಜರಿಂದ ಕಲಿತ ವಿದ್ಯೆಯನ್ನು ಹೇಳಿಕೊಡುವುದಿಲ್ಲ ಎಂದು ಶಾಬಾ ಶರೀಫ್ ನಿರಾಕರಿಸುತ್ತಾರೆ. ಇದರಿಂದ ಕೋಪಗೊಂಡ ಶೈಬೀನ್ ಅಶ್ರಫ್, ಅವರನ್ನು ತನ್ನ ಮನೆಯ ಎರಡನೇ ಮಹಡಿಯಲ್ಲಿರುವ ಕೊಠಡಿಯೊಂದರಲ್ಲಿ ಸರಪಳಿಯಿಂದ ಬಿಗಿದು ಕೂಡಿ ಹಾಕಿ ಸುಮಾರು‌ ಒಂದು ವರ್ಷ ಕಾಲ ದೈಹಿಕವಾಗಿ ಚಿತ್ರಹಿಂಸೆ ನೀಡುತ್ತಾನೆ. ಅವರ ಹಿಂಸೆ ತಾಳಲಾರದೆ ಶಾಬಾ ಶರೀಫ್ 2020ರ ಅಕ್ಟೋಬರ್ ನಲ್ಲಿ ಸಾವನ್ನುಪ್ಪಿದ್ದಾರೆ. ನಂತರ 7 ಮಂದಿ ‌ಸೇರಿ ಅವರ ಮೃತದೇಹವನ್ನು ಮಾರಕಾಯುಧದಿಂದ ತುಂಡರಿಸಿ ಚೀಲವೊಂದರಲ್ಲಿ ತುಂಬಿ ಕೇರಳದ ನದಿಯೊಂದರಲ್ಲಿ ಎಸೆದಿದ್ದಾರೆ ಎಂದು ತಿಳಿಸಿದ್ದಾರೆ.

ಈ ನಡುವೆ ಮುಖ್ಯ ಆರೋಪಿ ಶೈಬೀನ್ ಅಶ್ರಫ್ ಅಪಹರಣ ಮತ್ತು ಕೊಲೆಗೆ ತನ್ನ ಜೊತೆ ಸಹಕರಿಸಿದ್ದ ಸಹಚರರಿಗೆ ಕೊಡಬೇಕಿದ್ದ ಹಣವನ್ನು ನೀಡಿರಲಿಲ್ಲ. ಇದರಿಂದ ಕೋಪಗೊಂಡ ಆರೋಪಿಗಳು ಎಪ್ರಿಲ್ 24ರಂದು ಅಶ್ರಫ್ ಮನೆಗೆ ನುಗ್ಗಿ 7 ಲಕ್ಷ ರೂ. ನಗದು ಹಾಗೂ ಚಿನ್ನಾಭರಣವನ್ನು ದರೋಡೆ ಮಾಡಿರುವುದಾಗಿ ತನಿಖೆಯ ವೇಳೆ ಬಾಯಿಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ

ತನ್ನ ಮನೆಯಿಂದ ನಗದು ಹಾಗೂ ಚಿನ್ನಾಭರಣ ಕಳವಾಗಿರುವ ಬಗ್ಗೆ ಶೈಬೀನ್ ಅಶ್ರಫ್ ಪೊಲೀಸ್ ದೂರು ದಾಖಲಿಸಿದ್ದರಿಂದ‌ ಇಡೀ ಪ್ರಕರಣ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News