ರೈಲ್ವೆ ಕಂಬಿಗಳ ಬೇಲಿಯಲ್ಲಿ ಸಿಲುಕಿಕೊಂಡು ಪರದಾಡಿದ ಕಾಡಾನೆ
ಮಡಿಕೇರಿ ಮೇ 14 : ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ನೆಲ್ಯಹುದಿಕೇರಿ ಬರಡಿಯಲ್ಲಿ ರೈಲ್ವೆ ಕಂಬಿಗಳ ಬೇಲಿಯಲ್ಲಿ ಕಾಡಾನೆಯೊಂದು ಸಿಲುಕಿಕೊಂಡು ಪರದಾಡಿದ ಘಟನೆ ನಡೆದಿದೆ.
ಕಾಡಾನೆಗಳ ನುಸುಳುವಿಕೆಯನ್ನು ತಡೆಯಲು ನೆಲ್ಯಹುದಿಕೇರಿ ಬರಡಿ ಭಾಗದಲ್ಲಿ ರೈಲ್ವೆ ಕಂಬಿಗಳ ಬೇಲಿಯನ್ನು ಅಳವಡಿಸಲಾಗಿದೆ. ಇದು ಅವೈಜ್ಞಾನಿಕ ರೂಪದಲ್ಲಿರುವುದರಿಂದ ಗಜಪಡೆ ಗ್ರಾಮಗಳಿಗೆ ಲಗ್ಗೆ ಇಡುವುದನ್ನು ಬಿಟ್ಟಿಲ್ಲ. ಬಲಾಡ್ಯ ಆನೆಗಳು ಮನುಷ್ಯರಂತೆ ಮೇಲಿನಿಂದ ಬೇಲಿ ದಾಟಿದರೆ ಸಣ್ಣ ಆನೆಗಳು ಬೇಲಿಯ ತಳ ಭಾಗದಿಂದ ನುಸುಳಿ ತೋಟಗಳನ್ನು ಸೇರಿಸಿಕೊಳ್ಳುತ್ತವೆ. ಇದೇ ಮಾದರಿ ಇಂದು ಕೂಡ ಹೊಳೆಯ ಭಾಗದಿಂದ ಬಂದ ಸಾಧಾರಣ ವಯಸ್ಸಿನ ಕಾಡಾನೆಯೊಂದು ಕಾಫಿ ತೋಟವನ್ನು ಸೇರಲು ಬೇಲಿಯ ಕೆಳಭಾಗದಿಂದ ದಾಟುವ ಪ್ರಯತ್ನ ಮಾಡಿತು. ಆದರೆ ದಾಟಲಾಗದೆ ಮಧ್ಯದಲ್ಲೇ ಸಿಲುಕಿಕೊಂಡು ಪರದಾಡಿತು. ಕೆಲವು ಗಂಟೆಗಳ ಹರಸಾಹಸದಿಂದ ಹೇಗೋ ಬೇಲಿಯಿಂದ ಮುಕ್ತಿ ಹೊಂದಿ ತೋಟ ಸೇರಿಕೊಂಡಿತು.
ಸ್ಥಳದಲ್ಲಿ ಕೆಲವು ಕಾಲ ಆತಂಕ ಸೃಷ್ಟಿಯಾಗಿತ್ತು, ಗ್ರಾಮಸ್ಥರು ಮೊಬೈಲ್ ಗಳಲ್ಲಿ ದೃಶ್ಯವನ್ನು ಸೆರೆ ಹಿಡಿಯುವ ದೃಶ್ಯ ಸಾಮಾನ್ಯವಾಗಿತ್ತು.
ಕಾಡಾನೆ ಹಾವಳಿ ಮುಂದುವರೆದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಗ್ರಾ.ಪಂ ಸದಸ್ಯರುಗಳಾದ ಮನುಮಹೇಶ್, ಭುವನೇಂದ್ರ ಹಾಗೂ ಸ್ಥಳೀಯರಾದ ಪ್ರದೀಪ್ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತಿಲ್ಲವೆಂದು ಆರೋಪಿಸಿದ್ದಾರೆ.
ರೈಲ್ವೆ ಕಂಬಿ ಬೇಲಿ ಅವೈಜ್ಞಾನಿಕವಾಗಿದೆ, ಬೇಲಿಗೆ ಕೇವಲ ಎರಡು ಕಂಬಿಗಳನ್ನು ಅಳವಡಿಸಲಾಗಿದೆ. ಕನಿಷ್ಠ ಮೂರು ಕಂಬಿಗಳನ್ನು ಅಡ್ಡಲಾಗಿ ಅಳವಡಿಸಿದರೆ ಆನೆಗಳ ನುಸುಳುವಿಕೆಯನ್ನು ನಿಯಂತ್ರಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಕ್ಷಣ ಬೇಲಿಯನ್ನು ಬಲಪಡಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.