ಬೆಳೆ ಸಮೀಕ್ಷೆ ಸಕಾಲದಲ್ಲಿ ಪ್ರಾರಂಭಿಸಿ ಪೂರ್ಣಗೊಳಿಸಬೇಕು: ಸಚಿವ ಬಿ.ಸಿ.ಪಾಟೀಲ್
ಬೆಂಗಳೂರು, ಮೇ 14: ‘ಪೂರ್ವ ಮುಂಗಾರು, ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಲ್ಲಿ ನಿಗದಿಪಡಿಸಿದ ಅವಧಿಯೊಳಗೆ ಬೆಳೆ ಸಮೀಕ್ಷೆಯನ್ನು ಸಕಾಲದಲ್ಲಿ ಪ್ರಾರಂಭಿಸಿ ಪೂರ್ಣಗೊಳಿಸಬೇಕು. ಬೆಳೆ ಸಮೀಕ್ಷೆಯನ್ನು 30 ದಿನಗಳಲ್ಲಿ ಹಾಗೂ ಮೇಲ್ವಿಚಾರಣೆಯನ್ನು 15 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚನೆ ನೀಡಿದ್ದಾರೆ.
ಶನಿವಾರ ಇಲ್ಲಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇಲಾಖೆಯಿಂದ ಏರ್ಪಡಿಸಿದ್ದ 2022-23ನೆ ಸಾಲಿನ ಮುಂಗಾರು ಹಂಗಾಮಿನ 2ನೆ ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ರೈತರಿಂದ ಸಲ್ಲಿಕೆಯಾಗುವ ಬೆಳೆ ಸಮೀಕ್ಷೆಗೆ ಸಂಬಂಧಿಸಿದ ಆಕ್ಷೇಪಣೆಗಳಿಗೆ ಒಂದು ದಿನಾಂಕವನ್ನು ನಿಗದಿಪಡಿಸಲು ಹಾಗೂ ಮುಕ್ತಾಯಗೊಳಿಸಬೇಕು ಎಂದರು.
‘ಬೆಳೆ ಸಮೀಕ್ಷೆಯ ನಿಖರವಾದ ಮಾಹಿತಿಯನ್ನು ಸಕಾಲದಲ್ಲಿ ಭೂಮಿ ಕೋಶಕ್ಕೆ ಒದಗಿಸಿದಲ್ಲಿ ಪಹಣಿಗಳಲ್ಲಿ ಬೆಳೆಯ ವಿವರಗಳನ್ನು ಆಗಿಂದಾಗ್ಗೆ ಕಾಲೋಚಿತಗೊಳಿಸುವ ಮತ್ತು ಪಹಣಿಗಳಲ್ಲಿ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳ ಜೊತೆಗೆ ಪೂರ್ವ ಮುಂಗಾರಿನ ಬೆಳೆಗಳ ವಿವರಗಳನ್ನು ನಮೂದಿಸಲು ಅವಕಾಶ ಕಲ್ಪಿಸಿಕೊಡುವ ಕುರಿತು ಚರ್ಚಿಸಲಾಯಿತು ಎಂದರು.
‘ಪ್ರಮುಖ ಕಾರ್ಯಕ್ರಮಗಳಾದ ಬೆಳೆ ವಿಮೆ, ಬೆಂಬಲ ಬೆಲೆ, ಬೆಳೆ ನಷ್ಟ ಪರಿಹಾರ ಮತ್ತು ಇತರೆ ಕಾರ್ಯಕ್ರಮಗಳನ್ನು ಸಕಾಲದಲ್ಲಿ ಅನುಷ್ಠಾನಗೊಳಿಸಲು ಮಾಹಿತಿಯು ಪ್ರಮುಖವಾಗಿರುವುದರಿಂದ ಕಡ್ಡಾಯವಾಗಿ ನಿಗದಿಪಡಿಸಿದ ದಿನಾಂಕಗಳಂದು ಎಲ್ಲ ಚಟುವಟಿಕೆಗಳನ್ನು ಪೂರ್ಣಗೊಳಿಸಬೇಕು. ಬೆಳೆ ಸಮೀಕ್ಷೆಯ ರೈತರ ಮತ್ತು ಖಾಸಗಿ ನಿವಾಸಿ ಆಪ್‍ಗಳಲ್ಲಿ ಗುಣಮಟ್ಟವನ್ನು ಉತ್ತಮಪಡಿಸಲು ಯಾವುದಾದರೂ ಬದಲಾವಣೆಗಳು ಅವಶ್ಯಕತೆಯಿದ್ದಲ್ಲಿ ಚರ್ಚಿಸಿ ಮಾರ್ಪಾಡು ಮಾಡಲು ನಿರ್ಧರಿಸಲಾಯಿತು ಎಂದು ಹೇಳಿದರು.
‘ಬಹುವಾರ್ಷಿಕ ಬೆಳೆಗಳ ಸಮೀಕ್ಷೆಯನ್ನು ಕನಿಷ್ಠ ಮೂರು ವರ್ಷಗಳಿಗೆ ಒಂದು ಬಾರಿ ನಡೆಸುವ ಮೂಲಕ ಸಮೀಕ್ಷೆಯ ಒತ್ತಡವನ್ನು ಹಾಗೂ ಸರಕಾರಕ್ಕೆ ಆರ್ಥಿಕ ಹೊರೆಯನ್ನು ತಗ್ಗಿಸಲು ನಿರ್ಧರಿಸಲಾಯಿತು. ಬೆಳೆ ಸಮೀಕ್ಷೆ ಅಡಿ ರೈತರ ತಾಕುಗಳಲ್ಲಿ ಸಂಗ್ರಹಿಸುವ ಬೆಳೆ ವಿವರಗಳಿಗೆ ಸಂಬಂಧಿಸಿದಂತೆ ರೈತರಿಗೆ ಸೂಕ್ತ ಸಂದೇಶಗಳನ್ನು ರವಾನಿಸಲು ಹಾಗೂ ಐವಿಆರ್‍ಎಸ್ ವ್ಯವಸ್ಥೆಯಡಿ ರೈತರಿಗೆ ಮೊಬೈಲ್ ಕರೆಗಳನ್ನು ಮಾಡುವ ಮೂಲಕ ಬೆಳೆ ಸಮೀಕ್ಷೆಯ ಗುಣಮಟ್ಟವನ್ನು ಹೆಚ್ಚಿಸಿ ರೈತರನ್ನು ಸ್ವಾವಲಂಬಿಗಳನ್ನಾಗಿಸುವುದು ಸಮೀಕ್ಷೆ ಉದ್ದೇಶವಾಗಿದ್ದು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದು ಸೂಕ್ತವೆಂದು ತೀರ್ಮಾನಿಸಲಾಯಿತು.
ಬೆಳೆ ಸಮೀಕ್ಷೆಯ ರೈತರ ಆ್ಯಪ್ ಕುರಿತು ಗ್ರಾಮ, ಗ್ರಾ.ಪಂ., ಹೋಬಳಿ, ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಹೆಚ್ಚಿನ ಪ್ರಚಾರ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಮೀಕ್ಷೆ ಉತ್ತಮಪಡಿಸುವ ನಿಟ್ಟಿನಲ್ಲಿ ಯಾವುದೇ ಸಲಹೆ/ಸಮಸ್ಯೆಗಳಿದ್ದಲ್ಲಿ ಕೇಂದ್ರ ಕಚೇರಿಯ ಅಥವಾ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಹಂಚಿಕೊಳ್ಳಲು ತಿಳಿಸಲಾಯಿತು.
ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಕಳಸದ, ಭೂಮಿ ಉಸ್ತುವಾರಿ ಕೋಶದ ವಿಶೇಷ ಅಧಿಕಾರಿ ನವೀನ್ ಕುಮಾರ್, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜಂಟಿ ನಿರ್ದೇಶಕ ಪರಪ್ಪಸ್ವಾಮಿ ಸೇರಿದಂತೆ ಹಿರಿಯ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.