ಲಾಟರಿ ಎತ್ತಿ ಸಿಎಂ ಅಭ್ಯರ್ಥಿಯನ್ನು ಅಂತಿಮಗೊಳಿಸುವಿರಾ: ಕಾಂಗ್ರೆಸ್ ಗೆ ಬಿಜೆಪಿ ಪ್ರಶ್ನೆ

Update: 2022-05-14 17:56 GMT

ಬೆಂಗಳೂರು: 'ಇದೇ ನನ್ನ ಕೊನೆಯ ಚುನಾವಣೆ ಎಂದು ಹತ್ತಾರು ವರ್ಷಗಳಿಂದ ಹೇಳಿಕೊಂಡೇ ಬಂದಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಆಸೆ ಇನ್ನೂ ಬಿಟ್ಟಿಲ್ಲ. ಡಿಕೆಶಿ ಆಸೆಗೆ ಈಗಿಂದೀಗಲೇ ತಣ್ಣೀರೆರಚುವ ಕೆಲಸ ಸಿದ್ದರಾಮಯ್ಯ ಬಣದಿಂದ ನಡೆಯುತ್ತಿದೆ' ಎಂದು ಬಿಜೆಪಿ ಆರೋಪಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ,  'ಲಾಟರಿ ಎತ್ತಿ ಸಿಎಂ ಅಭ್ಯರ್ಥಿಯನ್ನು ಅಂತಿಮಗೊಳಿಸುವಿರಾ?' ಎಂದು ಪ್ರಶ್ನಿಸಿದೆ. 

'ಮಾಜಿ ಸಂಸದೆ ರಮ್ಯಾ ಸೇರಿದಂತೆ ಅನೇಕ ಕಾಂಗ್ರೆಸ್‌ ನಾಯಕರು ಡಿಕೆಶಿ ನಡೆಯನ್ನು ಟೀಕಿಸಿ ಎಂಬಿ ಪಾಟೀಲರ ಪರವಾಗಿ ನಿಂತುಕೊಂಡರು. ಈಗ ಅದೇ ಎಂಬಿ ಪಾಟೀಲರು ಸಿದ್ದರಾಮಯ್ಯ ಅವರನ್ನೇ ಸಿಎಂ ಅಭ್ಯರ್ಥಿಯಾಗಿ ಘೋಷಿಸಿ ಎಂದು ಒತ್ತಡ ಹೇರುತ್ತಿದ್ದಾರೆ. ಚಿಂತನ ಶಿಬಿರಕ್ಕೆ ಹೋಗುವ ಮುನ್ನ ಮೀರ್‌ಸಾದಿಕ್ ರಣತಂತ್ರ ಹೆಣೆದಿದ್ದರೇ?' 

'ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎಂದು ಡಿಕೆಶಿವಕುಮಾರ್ ಅವರು ಹೋರಾಟ, ಎತ್ತಿನಗಾಡಿ ಪ್ರಯಾಣ, ಮೇಕೆದಾಟು ಪಾದಯಾತ್ರೆ ಮಾಡಿದ್ದೇ ಮಾಡಿದ್ದು! ಆದರೆ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷರನ್ನು ಗಣನೆಗೆ ತೆಗೆದುಕೊಳ್ಳದೆ ತಾನೇ ಮುಂದಿನ ಸಿಎಂ ಎಂದು ಪಕ್ಷದೊಳಗೆ ಪ್ರಭಾವಿಯಾಗುತ್ತಿದ್ದಾರೆ. ಡಿಕೆಶಿ ಲೆಕ್ಕಕ್ಕಿಲ್ಲವೇ?' ಎಂದು ಸರಣಿ ಟ್ವೀಟ್ ಗಳ ಮೂಲಕ ಬಿಜೆಪಿ ಕಾಂಗ್ರೆಸ್ ಗೆ ಪ್ರಶ್ನೆ ಮಾಡಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News