ವಿಚ್ಛೇದನ ಅರ್ಜಿ ವಿಚಾರಣೆ: ಪತ್ನಿಯ ವ್ಯಾಜ್ಯದ ವೆಚ್ಚ ಪಾವತಿಗೆ ಹೈಕೋರ್ಟ್ ಆದೇಶ

Update: 2022-05-15 12:48 GMT

ಬೆಂಗಳೂರು, ಮೇ 15: ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಪತಿ ಸಲ್ಲಿಸಿರುವ ಅರ್ಜಿ ಸಂಬಂಧ ವಕೀಲರನ್ನು ನಿಯೋಜಿಸಿಕೊಂಡು ವ್ಯಾಜ್ಯದಲ್ಲಿ ಮುಂದುವರಿಯಲು ಪತಿಯಿಂದಲೇ ಹಣ ಕೊಡಿಸುವಂತೆ ಮಹಿಳೆಯೊಬ್ಬರು ಮಾಡಿದ್ದ ಮನವಿಗೆ ಸ್ಪಂದಿಸಿರುವ ಹೈಕೋರ್ಟ್, 25 ಸಾವಿರ ರೂ.ಪಾವತಿಸುವಂತೆ ಗಂಡನಿಗೆ ನಿರ್ದೇಶಿಸಿದೆ. 

ಪತಿ ಸಲ್ಲಿಸಿರುವ ವಿಚ್ಛೇದನ ಅರ್ಜಿಯಲ್ಲಿ ವಿಚಾರಣೆ ಎದುರಿಸಲು ಆರ್ಥಿಕ ಸಮಸ್ಯೆ ಇದ್ದು, ವ್ಯಾಜ್ಯದ ವೆಚ್ಚ ಭರಿಸಲು ಪತಿಗೆ ನಿರ್ದೇಶಿಸಬೇಕೆಂದು ಕೋರಿ ಮೈಸೂರಿನ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿರುವ ಹೈಕೋರ್ಟ್ ಈ ಆದೇಶ ಮಾಡಿದೆ. 

ಪ್ರತಿವಾದಿ ಪತಿ ವ್ಯಾಜ್ಯದ ವೆಚ್ಚಕ್ಕಾಗಿ 25 ಸಾವಿರ ರೂ.ಗಳನ್ನು ಮೈಸೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಠೇವಣಿ ಇಡಬೇಕು. ಆ ಹಣ ಪಡೆದುಕೊಳ್ಳಲು ಪತ್ನಿ ಮುಕ್ತ ಅವಕಾಶ ಹೊಂದಿದ್ದಾರೆ ಎಂದು ತಿಳಿಸಿದ ನ್ಯಾಯಾಲಯ ಅರ್ಜಿ ಇತ್ಯರ್ಥಪಡಿಸಿದೆ. 

ವಿಚಾರಣಾ ಕೋರ್ಟ್‍ನಲ್ಲಿರುವ ವಿಚ್ಛೇದನ ಪ್ರಕರಣದ ವಿಚಾರಣೆಗೆ ಸೂಕ್ತ ಸಹಕಾರ ನೀಡಬೇಕು ಎಂದು ದಂಪತಿಗೆ ನಿರ್ದೇಶಿಸಿರುವ ಹೈಕೋರ್ಟ್, ಪ್ರಕರಣವನ್ನು ಶೀಘ್ರ ಇತ್ಯರ್ಥಪಡಿಸುವಂತೆ ಕೌಟುಂಬಿಕ ಕೋರ್ಟ್‍ಗೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News