ಭಗತ್ ಸಿಂಗ್ ಪಾಠ ಬಿಟ್ಟು, ಹೆಗಡೆವಾರ್ ಭಾಷಣ ಸೇರ್ಪಡೆ; ಸ್ಥಾಪಿತ ಸತ್ಯ ತಿರುಚುವ ಹುನ್ನಾರ: ಎಐಡಿಎಸ್‍ಓ

Update: 2022-05-15 13:11 GMT

ಬೆಂಗಳೂರು, ಮೇ 15: ‘ರಾಜ್ಯ ಸರಕಾರವು ಹೊಸದಾಗಿ ಪ್ರಕಟಿಸುತ್ತಿರುವ 10ನೇ ತರಗತಿ ಕನ್ನಡ ಪಠ್ಯ ಪುಸ್ತಕದಲ್ಲಿ ಭಗತ್ ಸಿಂಗ್ ಪಾಠವನ್ನು ಕೈ ಬಿಟ್ಟು ಕೆ.ಬಿ. ಹೆಗೆಡೆವಾರ್ ಭಾಷಣ ಸೇರ್ಪಡೆ ಮಾಡಿರುವುದು ಸ್ಥಾಪಿತ ಸತ್ಯವನ್ನು ತಿರುಚುವ ಹುನ್ನಾರವಾಗಿದೆ' ಎಂದು ಆಲ್ ಇಂಡಿಯಾ ಡೆಮೋಕ್ಟ್ರಟಿಕ್ ಸ್ಟೂಡೆಂಟ್ ಆರ್ಗನೈಜೆಷನ್ ಆಕ್ರೋಶವ್ಯಕ್ತಡಿಸಿದೆ.

‘ರಾಜ್ಯ ಸರಕಾರದಿಂದ ಹೊಸದಾಗಿ ಪ್ರಕಟಿಸಲ್ಪಡುತ್ತಿರುವ 10ನೆ ತರಗತಿಯ ಕನ್ನಡ ಪಠ್ಯದಿಂದ, ಸ್ವಾತಂತ್ರ್ಯಕ್ಕಾಗಿ 23ನೆ ವಯಸ್ಸಿಗೆ ಗಲ್ಲಿಗೇರಿದ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್‍ರ ಕುರಿತಾದ ಪಾಠವನ್ನು ಕೈಬಿಟ್ಟು ಆರೆಸೆಸ್ಸ್ ಸ್ಥಾಪಕ ಹಾಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದೆ ಹೋರಾಟಕ್ಕೆ ಬೆನ್ನು ತೋರಿಸಿ, ಜನತೆಯ ಐಕ್ಯತೆಗೆ ವಿರುದ್ಧವಾಗಿ ಕೋಮು ಭಾವನೆಗಳನ್ನು ಹರಡಿದ ಹೆಗಡೆವಾರ್ ಭಾಷಣವನ್ನು ಸೇರಿಸಲಾಗಿದೆ. ಈ ಮೂಲಕ ಆಡಳಿತಾರೂಢ ಬಿಜೆಪಿ ಮತ್ತು ಸಂಘಪರಿವಾರದವರಿಗೆ ಭಗತ್ ಸಿಂಗ್ ಸೇರಿದಂತೆ ಈ ದೇಶದ ಸ್ವಾತಂತ್ರ್ಯಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳ ಬಗ್ಗೆ ಕಿಂಚಿತ್ತೂ ಗೌರವ ಇಲ್ಲದಿರುವುದನ್ನು ಸ್ಪಷ್ಟೀಕರಿಸುತ್ತದೆ ಎಂದು ಟೀಕಿಸಿದೆ.

ಇದಲ್ಲದೆ, ಜನಾಂಗೀಯ ದ್ವೇಷವನ್ನು ಖಂಡಿಸುವ ಪಿ.ಲಂಕೇಶ್ ಅವರ ‘ಮೃಗ ಮತ್ತು ಸುಂದರಿ', ಎ.ಎನ್. ಮೂರ್ತಿರಾಯರ ‘ವ್ಯಾಘ್ರಗೀತೆ', ಸಾರಾ ಅಬೂಬಕರ್ ಅವರ ‘ಯುದ್ಧ' ದಂತಹ ಹಲವು ಮೌಲ್ಯಯುತ ಪಾಠಗಳನ್ನು ಕೈಬಿಡಲಾಗಿದೆ. ಹಾಗಾಗಿ ಸರಕಾರವು ತನ್ನ ವಿಚಾರಧಾರೆಗಳನ್ನು ಶಿಕ್ಷಣದಲ್ಲಿ ತೂರಿಸುವ ಹುನ್ನಾರವಾಗಿ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯನ್ನು ರಚಿಸಿರುವುದು ಈಗ ಸಾಬೀತಾಗಿದೆ. ಸಂಕುಚಿತ ವಿಚಾರಗಳನ್ನು ಹರಡುವ ಸರ್ಕಾರದ ಈ ಷಡ್ಯಂತ್ರದ ವಿರುದ್ಧ ರಾಜ್ಯದ ಪ್ರಜ್ಞಾವಂತ ಜನತೆ ಹಾಗೂ ವಿದ್ಯಾರ್ಥಿ ಸಮುದಾಯ ಧ್ವನಿ ಎತ್ತಬೇಕು ಎಂದು ಎಐಡಿಎಸ್‍ಓ ಕರೆ ನೀಡಿದೆ.

ಪ್ರಜಾತಾಂತ್ರಿಕ ಧರ್ಮನಿರಪೇಕ್ಷ ಹಾಗೂ ವೈಜ್ಞಾನಿಕವಾಗಿರಬೇಕು ಎಂಬುದು ನವೋದಯ ಚಳುವಳಿಯ ಹರಿಕಾರರು ಮತ್ತು ಸ್ವಾತಂತ್ರ್ಯ ಸಂಗ್ರಾಮದ ಹಲವು ಮಹಾನ್ ಹೋರಾಟಗಾರರ ಆಶಯವಾಗಿತ್ತು. ಆದರೆ ಇಲ್ಲಿಯವರೆಗೂ ಆಡಳಿತ ನಡೆಸಿರುವ ಎಲ್ಲಾ ಪಕ್ಷಗಳು ಈ ಆಶಯಗಳಿಗೆ ವಿರುದ್ಧವಾಗಿ ತಮ್ಮ ಅಜೆಂಡಾಗಳನ್ನು ಪುಸ್ತಕದಲ್ಲಿ ತೂರಿಸುವ ಷಡ್ಯಂತ್ರ ರೂಪಿಸುತ್ತಾ ಬಂದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಹೋರಾಟಗಾರರನ್ನು ಕಡೆಗಣಿಸಿ ಹೆಗಡೆವಾರರ ಭಾಷಣ ಸೇರಿಸಿದ್ದು ದುರಂತ: ರಾಜ್ಯ ಸರಕಾರವು ಭಗತ್ ಸಿಂಗ್ ರವರ ಜೀವನಕ್ಕೆ ಸಂಬಂಧಿಸಿದ ಪಠ್ಯವನ್ನು ತೆಗೆದು ಹಾಕಿ ಆರೆಸೆಸ್ಸ್ ಸಂಸ್ಥಾಪಕ ಹೆಗಡೆವಾರರ ಭಾಷಣವನ್ನು ಸೇರಿಸಿದ್ದು, ದೊಡ್ಡ ದುರಂತವಾಗಿದೆ. ಇದು ಸ್ವಾತಂತ್ರ್ಯ ಹೋರಾಟಗಾರಿಗೆ ಮಾಡುವ ಅವಮಾನವಾಗಿದೆ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯು ಟೀಕಿಸಿದೆ.
ಹೆಗಡೆವಾರ ಅವರು ಆರೆಸೆಸ್ಸ್ ಸಂಸ್ಥಾಪಕಾರಗಿರಬಹುದು. ಆದರೆ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆ ನಗಣ್ಯವಾಗಿದೆ. ಅಷ್ಟಕ್ಕೂ ಹೆಗಡೆವಾರರು ದೇಶದ ಮಹಾನ್ ಹೋರಾಟಗಾರ ಎಂದು ನಮ್ಮ ದೇಶದ ಸಮಸ್ತ ಜನತೆ ಮತ್ತು ಯಾವೊಬ್ಬ ಇತಿಹಾಸ ತಜ್ಞರು ಒಪ್ಪಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.

ಪಠ್ಯಕ್ರಮ ಎನ್ನುವುದು ಯಾವುದೇ ಪಕ್ಷದ ಮುಖವಾಣಿ ಆಗಬಾರದು. ಅದು ಕಾಲಗತಿಯಲ್ಲಿ ಸಾಬೀತಾದ ಪ್ರಕ್ರೀಯೆಗಳ ಮೂಲಕ ವೈಜ್ಞಾನಿಕ ಸತ್ಯ ಸಂಗತಿಗಳನ್ನು ಒಳಗೊಂಡಿರಬೇಕು ಮತ್ತು ಪ್ರಜಾತಾಂತ್ರಿಕ ಮೌಲ್ಯಗಳನ್ನು ಎತ್ತಿಹಿಡಿಯುವಂತಿರಬೇಕು. ಆದರೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರವು ತನ್ನ ಪಕ್ಷ ಮತ್ತು ಆರ್‍ಎಸ್‍ಎಸ್‍ನ ಸಿದ್ದಂತಗಳನ್ನು ಪಠ್ಯಕ್ರಮದಲ್ಲಿ ತೂರುಕುವ ಪ್ರಯತ್ನ ಮಾಡುತ್ತಿದೆ. ಈ ಹೀನ ಕೆಲಸವನ್ನು ಕೈ ಬಿಡಬೇಕು ಎಂದು ಅಖಿಲ ಭಾರತ ಶಿಕ್ಷಣ ಸಮಿತಿಯು ಸರಕಾರವನ್ನು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News