ಮಂಡ್ಯ: ಮೈಷುಗರ್ ಕಾರ್ಖಾನೆ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ಕೆ ತಡೆ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

Update: 2022-05-15 13:32 GMT

ಮಂಡ್ಯ, ಮೇ 15: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹುಟ್ಟುಹಬ್ಬದ ಹಿನ್ನೆಲೆ ನಗರದ ಮೈಷುಗರ್ ಕಾರ್ಖಾನೆ ಆವರಣ ಸ್ವಚ್ಛತೆಗೆ ಮುಂದಾದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ನಲಪಾಡ್ ಮತ್ತು ಇತರ ಮುಖಂಡರನ್ನು ಪೊಲೀಸರು ಬಂಧಿಸಿದ ಘಟನೆ ರವಿವಾರ ನಡೆದಿದೆ.

ಜುಲೈನಲ್ಲಿ ಕಾರ್ಖಾನೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ತಮ್ಮ ನಾಯಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಯುವ ಕಾಂಗ್ರೆಸ್ ಘಟಕ ರಾಜ್ಯಾಧ್ಯಕ್ಷ ಮುಹಮ್ಮದ್ ನಲಪಾಡ್ ನೇತೃತ್ವದಲ್ಲಿ ಕಾರ್ಖಾನೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಅದರಂತೆ ಬೆಳಗ್ಗೆ ಮೈಷುಗರ್ ವೃತ್ತದಿಂದ ಮೆರವಣಿಗೆಯಲ್ಲಿ ಕಾರ್ಖಾನೆ ಬಳಿಗೆ ತೆರಳಿದ ನೂರಾರು ಮಂದಿ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದ ಪೊಲೀಸರು, ಕಾರ್ಖಾನೆ ಆವರಣ ಪ್ರವೇಶ ಮಾಡಬಾರದೆಂದು ಹೇಳಿದರು. ಇದರಿಂದ ಕೆರಳಿದ ಕಾರ್ಯಕರ್ತರು ಪೊಲೀಸರ ಜತೆ ವಾಗ್ವಾದಕ್ಕಿಳಿದರು.

ರೈತರಿಗೆ ಅನುಕೂಲವಾಗಲೆಂದು ಕಾರ್ಖಾನೆ ಆವರಣ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದಕ್ಕೆ ಕಾರ್ಖಾನೆ ಆಡಳಿತ ಮಂಡಳಿ ಅನುಮತಿ ನೀಡಿದೆ. ಆದರೆ, ದಕ್ಷಿಣ ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ನೀತಿ ಸಂಹಿತೆ ನೆಪಹೇಳಿ ಸ್ವಚ್ಛತಾ ಕಾರ್ಯಕ್ಕೆ ಅಡ್ಡಿಪಡಿಸುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ತಮಗೆ ಕಾರ್ಖಾನೆ ಸ್ವಚ್ಛತೆ ಮಾಡಲು ಅವಕಾಶ ನೀಡಬೇಕೆಂದು ಪಟ್ಟುಹಿಡಿದು ಕೆಲಕಾಲ ಧರಣಿ ಕುಳಿತ ಕಾರ್ಯಕರ್ತರು, ಕೊನೆಗೆ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು ಕಾರ್ಖಾನೆ ಆವರಣ ತಲುಪಲು ಯತ್ನಿಸಿದರು. ಆಗ ನಲಪಾಡ್, ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಐಶ್ವರ್ಯ, ಜಿಲ್ಲಾಧ್ಯಕ್ಷ ವಿಜಯಕುಮಾರ್, ಮುಖಂಡ ಗಣಿಗ ರವಿಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಇತರ ಮುಖಂಡರನ್ನು ಪೊಲೀಸರು ಬಂಧಿಸಿ ವಾಹನಕ್ಕೆ ಹತ್ತಿಸಿಕೊಂಡರು.

ಇದರಿಂದ ಕೆರಳಿದ ಕಾರ್ಯಕರ್ತರು ದಾರಿಗೆ ಅಡ್ಡಲಾಗಿ ಮಲಗಿ ಪೊಲೀಸ್ ವಾಹನ ತೆರಳದಂತೆ ಅಡ್ಡಿಪಡಿಸಿದರು. ದಾರಿಗೆ ಅಡ್ಡಲಾಗಿ ಮಲಗಿದ ಮಹಿಳಾ ಕಾರ್ಯಕರ್ತರನ್ನೂ ಪೊಲೀಸರು ಎಳೆದುಹಾಕಿ ಮುಖಂಡರನ್ನು ವಾಹನದಲ್ಲಿ ಕರೆದೊಯ್ದರು.
ನಲಪಾಡ್ ಆಕ್ರೋಶ:
ಕಾರ್ಖಾನೆ ಸ್ವಚ್ಛತಾ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಕಾರ್ಖಾನೆ ಆಡಳಿತ ಮಂಡಳಿ ಮತ್ತು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ, ನಲಪಾಡ್, ಮೊದಲು ಕಾರ್ಯಕ್ರಮಕ್ಕೆ ಅನುಮತಿ ನೀಡಿ ಈಗ ಏಕಾಏಕಿ ನಿರಾಕರಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

ಹಲವು ವರ್ಷಗಳ ನಂತರ ಕಾರ್ಖಾನೆ ಆರಂಭವಾಗುತ್ತಿದ್ದು, ಕಾರ್ಖಾನೆ ಆವರಣವನ್ನು ಸ್ವಚ್ಛತೆ ಮಾಡಿ ರೈತರಿಗೆ ಅನುಕೂಲ ಮಾಡುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದರಲ್ಲಿ ರಾಜಕೀಯ ಉದ್ದೇಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕಾರ್ಖಾನೆ ಆವರಣ ಸ್ವಚ್ಛತೆಗೆ ಸುಮಾರು 10 ಲಕ್ಷ ರೂ. ವೆಚ್ಚವಾಗುತ್ತದೆಂದು ಆಡಳಿತ ಮಂಡಳಿ ಹೇಳಿದೆ. ಅಷ್ಟೂ ವೆಚ್ಚವನ್ನು ಭರಿಸಿ ನಾವು ಕಾರ್ಖಾನೆ ಸ್ವಚ್ಛ ಮಾಡುತ್ತೇವೆ. ಆದರೆ, 40 ಪರ್ಸೆಂಟೇಜ್ ತಪ್ಪುತ್ತದೆಂದು ಈ ರೀತಿ ತಡೆಯೊಡ್ಡಲಾಗಿದೆ ಎಂದು ಅವರು ದೂರಿದರು.

ನಾವು ಟ್ರಾ್ಯಕ್ಟರ್, ಜೆಸಿಬಿ ಜತೆಗೆ ಸ್ವಚ್ಛತೆಗೆ ಸಜ್ಜಾಗಿ ಬಂದಿದ್ದೇವೆ. ಬೇಕಾದರೆ, 40 ಪರ್ಸೆಂಟೇಜ್ ಹಣವನ್ನು ಅಂದರೆ, 4 ಲಕ್ಷ ರೂ.ಗಳ ಚೆಕ್‌ನ್ನು ಈಗಲೇ ಕೊಡುತ್ತೇವೆ. ನಮಗೆ ಅವಕಾಶ ನೀಡಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News