ಕೊಡಗಿನ ವಿದ್ಯಾಸಂಸ್ಥೆಯಲ್ಲಿ ಬಜರಂಗದಳದಿಂದ ಶಸ್ತ್ರಾಸ್ತ್ರ ತರಬೇತಿ ಶಿಬಿರ; ವ್ಯಾಪಕ ಆಕ್ರೋಶ

Update: 2022-05-15 17:09 GMT

ಮಂಗಳೂರು, ಮೇ 19 : ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ತನ್ನ ಕಾರ್ಯಕರ್ತರಿಗೆ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಶಾಲಾ ಆವರಣವೊಂದರಲ್ಲಿ ತ್ರಿಶೂಲ ದೀಕ್ಷೆ ಹಾಗೂ ನಿರ್ಜನ ಪ್ರದೇಶವೊಂದರಲ್ಲಿ ಬಂದೂಕು ತರಬೇತಿ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. 

ಸಂಘಪರಿವಾರ ಸಂಘಟನೆಗಳ ವತಿಯಿಂದ ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾ ಸಂಸ್ಥೆಯ ಆವರಣದಲ್ಲಿ ಒಂದು ವಾರಗಳ ಕಾಲ ನಡೆದ ಶೌರ್ಯ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಕಾರ್ಯಕರ್ತರಿಗೆ ತ್ರಿಶೂಲ ವಿತರಿಸುತ್ತಿರುವ ಫೋಟೋಗಳು ಇದೀಗ ಎಲ್ಲೆಡೆ ವೈರಲ್ ಆಗಿದೆ. ಅಲ್ಲದೆ ಶಿಬಿರದ ಸಂದರ್ಭ ಬಂದೂಕು ತರಬೇತಿ ನೀಡಿರುವ ಫೋಟೋಗಳೂ ಹರಿದಾಡುತ್ತಿವೆ. ಆಲ್ಟ್‌ ನ್ಯೂಸ್‌ ಸಹಸಂಸ್ಥಾಪಕ ಮುಹಮ್ಮದ್‌ ಝುಬೈರ್‌ ಕಾರ್ಯಕ್ರಮದ ಫೋಟೊ ಮತ್ತು ವೀಡಿಯೋಗಳನ್ನು ಟ್ವಿಟರ್‌ ನಲ್ಲಿ ಪ್ರಕಟಿಸಿದ್ದಾರೆ. 

ಈ ಫೋಟೊವನ್ನು ರಿಟ್ವೀಟ್‌ ಮಾಡಿರುವ ಕಾಂಗ್ರೆಸ್‌ ನಾಯಕಿ ಲಾವಣ್ಯಾ ಬಳ್ಳಾಲ್‌, "ಯಾವುದೇ ನಾಯಕರ ಮಕ್ಕಳೂ ರಾಜಕೀಯಕ್ಕೆ ಆಹಾರವಾಗುವುದಿಲ್ಲ" ಎಂದಿದ್ದಾರೆ. "ಕರ್ನಾಟಕದಲ್ಲಿ ಸಂಪೂರ್ಣ ಒಂದು ವಾರಗಳ ಕಾಲ ವಿದ್ಯಾಸಂಸ್ಥೆಯೊಂದನ್ನು ಮಾರಕಾಯುಧ ತರಬೇತಿಗಾಗಿ ಬಳಸಲಾಗಿದೆ. ಆದರೆ, ಅಲ್ಲಿ ಹಿಜಾಬ್‌ ಗೆ ಯಾವುದೇ ಸ್ಥಾನವಿಲ್ಲ" ಎಂದು ಕಾಶ್ಮೀರಿ ಪತ್ರಕರ್ತೆ ಸಮಿಯಾ ಲತೀಫ್‌ ಟ್ವೀಟ್‌ ಮಾಡಿದ್ದಾರೆ. "ಅದ್ಭುತ! ಶಿಕ್ಷಣ ಸಂಸ್ಥೆಯಲ್ಲಿ ಮುಕ್ತ ಶಸ್ತ್ರಾಸ್ತ್ರ ತರಬೇತಿ ಶಿಬಿರ?! ಅವರು ಯಾರನ್ನು ಕೊಲ್ಲಲು ತರಬೇತಿ ಪಡೆಯುತ್ತಿದ್ದಾರೆ? ಅವರ ಸ್ವಂತ ಭವಿಷ್ಯ, ಭಾರತದ ವರ್ತಮಾನ ಮತ್ತು ಭವಿಷ್ಯದ ಹೊರತಾಗಿ! ಎಂತಹ ವಿಲಕ್ಷಣ ಹೋಲಿಕೆ." ಎಂದು ರೇಡಿಯೊ ನಿರೂಪಕಿ ಸಯೇಮಾ ಟ್ವೀಟ್‌ ಮಾಡಿದ್ದಾರೆ.

ಶಿಬಿರದಲ್ಲಿ ರಾಜ್ಯದ ವಿವಿಧ ಭಾಗಗಳ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ 120 ಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗಿರುವುದು ಖಾತ್ರಿಯಾಗಿದೆ. ಅಲ್ಲದೆ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ವಿಧಾನ ಪರಿಷತ್ ಸದಸ್ಯ ಎಂ.ಪಿ.ಅಪ್ಪಚ್ಚುರಂಜನ್, ಹಿಂದುತ್ವ ಸಂಘಟನೆಗಳ ರಾಜ್ಯ ಮಟ್ಟದ ಪ್ರಮುಖರು ಪಾಲ್ಗೊಂಡು ಸಂದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹಿಂದೂ ಸಂಘಟನೆಗಳ ಪ್ರಮುಖರು ಹಿಂದೂ ಧರ್ಮ ಮತ್ತು ಸ್ವಯಂ ರಕ್ಷಣೆ ಕುರಿತು ಬೌದ್ಧಿಕ್ ನಲ್ಲಿ ವಿವರಿಸಿದ್ದಾರೆ ಎಂದು ಹೇಳಲಾಗಿದೆ.

ಯಾರ ವಿರುದ್ಧವೂ ಅಲ್ಲ: ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ ಮಾತನಾಡಿ ಸುಮಾರು 20 ವರ್ಷಗಳ ನಂತರ ಕೊಡಗಿನಲ್ಲಿ ಹಿಂದೂ ಜಾಗೃತಿ ಶಿಬಿರ ನಡೆಸಲು ಅವಕಾಶ ದೊರೆತಿದೆ. ತ್ರಿಶೂಲ ಧಾರಣೆ ಪದ್ಧತಿ ಹಿಂದೂ ಸಂಪ್ರದಾಯವಾಗಿದ್ದು, ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಬಹಳ ವರ್ಷಗಳಿಂದಲೂ ಇದು ನಡೆದುಕೊಂಡು ಬಂದಿದೆ. ಏರ್‌ ಗನ್ ಮೂಲಕ ತರಬೇತಿ ನೀಡಲಾಗಿದ್ದು, ಇದು ಹಿಂದೂ ಧರ್ಮ ಮತ್ತು ಸ್ವಯಂ ರಕ್ಷಣೆಯ ಪಾಠವೇ ಹೊರತು ಯಾರ ವಿರುದ್ಧವೂ ನಡೆದ ಚಟುವಟಿಕೆ ಅಲ್ಲವೆಂದು ಸ್ಪಷ್ಟಪಡಿಸಿದ್ದಾರೆ. 

ಗುಪ್ತಚರ ಇಲಾಖೆಗೆ ಮಾಹಿತಿ ಇಲ್ಲ:

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಪೊನ್ನಂಪೇಟೆಯ ಶಾಲಾ ಆವರಣದಲ್ಲಿ ಒಂದು ವಾರ ನಡೆಸಿದ ಶಿಬಿರದ ಬಗ್ಗೆ ಜಿಲ್ಲಾ ಗುಪ್ತಚರ ಇಲಾಖೆಗೆ ಮಾಹಿತಿ ಇಲ್ಲವೆಂದು ತಿಳಿದು ಬಂದಿದೆ.  ತ್ರಿಶೂಲ ದೀಕ್ಷೆ ಮತ್ತು ಏರ್‌ ಗನ್ ಮೂಲಕ ತರಬೇತಿ ನೀಡುತ್ತಿರುವ ಫೋಟೋಗಳು ವೈರಲ್ ಆದ ನಂತರವಷ್ಟೇ ಈ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

ಕಾರ್ಯಕ್ರಮದಲ್ಲಿ ಭಾಗಿಯಾದ ಹಲವಾರು ಕಾರ್ಯಕರ್ತರು ಈ ಕುರಿತ ಫೋಟೊಗಳನ್ನು ತಮ್ಮ ಸಾಮಾಜಿಕ ತಾಣ ಖಾತೆಗಳಲ್ಲೂ ಹಂಚಿಕೊಂಡಿದ್ದಾರೆ. ಈ ಕುರಿತು ಮಾಹಿತಿಗಾಗಿ ʼವಾರ್ತಾಭಾರತಿʼ ಪೊನ್ನಂಪೇಟಿ ಪಿಎಸ್ಸೈ ಹಾಗೂ ಕೊಡಗು ಜಿಲ್ಲಾ ಎಸ್ಪಿಯವರಿಗೆ ಕರೆ ಮಾಡಿದ್ದು, ಅವರು ಕರೆಗೆ ಲಭ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News