ರಾಜ್ಯದಲ್ಲಿ ಇನ್ನೂ 3 ದಿನ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

Update: 2022-05-15 15:00 GMT

ಬೆಂಗಳೂರು, ಮೇ 15: ರಾಜ್ಯದಲ್ಲಿ ಎರಡು ವಾರಗಳಿಂದ ಬೀಳುತ್ತಿರುವ ಮಳೆ ಇನ್ನೂ ಮೂರು ದಿನಗಳ ಕಾಲ ಮುಂದುವರೆಯುವ ಸಾಧ್ಯತೆಗಳಿದ್ದು, ಅಸಾನಿ ಚಂಡಮಾರುತ ದುರ್ಬಲಗೊಂಡಿದ್ದರೂ ಮುಂಗಾರು ಪೂರ್ವ ಮಳೆ ರಾಜ್ಯದ ಒಳನಾಡಿನಲ್ಲಿ ಮುಂದುವರೆದಿದೆ.

ಹವಾಮಾನ ಮುನ್ಸೂಚನೆ ಪ್ರಕಾರ, ಮೇ 18ರ ವರೆಗೂ ಮಳೆ ಮುಂದುವರೆಯುವ ಸೂಚನೆಗಳು ಗೋಚರಿಸುತ್ತಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ, ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದ್ದಾರೆ.

ಮುಂಗಾರು ಪೂರ್ವ ಮಳೆ ಮೇ ತಿಂಗಳಿನಲ್ಲಿ ದಾಖಲೆ ಪ್ರಮಾಣದಲ್ಲಿ ಬಿದ್ದಂತಾಗಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೂರು ದಿನಗಳ ಕಾಲ ಮಳೆ ಮುಂದುವರಿಯಲಿದೆ. ಕೆಲವು ಕಡೆ ಗುಡುಗು, ಮಿಂಚು, ಸಿಡಿಲಿನ ಆರ್ಭಟದಿಂದ ಮಳೆಯಾಗುವ ಸಂಭವವಿದೆ. ಅಸಾನಿ ಚಂಡಮಾರುತದ ಬೆನ್ನಲ್ಲೇ ನೈಋತ್ಯ ಮುಂಗಾರು ಚೇತರಿಕೆ ಕಂಡಿದ್ದು, ನಿಗದಿತ ಅವಧಿಗಿಂತ ಮುಂಚೆಯೇ ಮುಂಗಾರು ಆರಂಭವಾಗುವ ನಿರೀಕ್ಷೆ ಇದೆ. ಮೇ 27ಕ್ಕೆ ನೈಋತ್ಯ ಮುಂಗಾರು ಕೇರಳಕ್ಕೆ ಆಗಮಿಸುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದರು.

ಸಾಮಾನ್ಯವಾಗಿ ಜೂ.1ಕ್ಕೆ ಮುಂಗಾರು ಕೇರಳ ಪ್ರವೇಶಿಸುತ್ತಿದ್ದು, ಈ ಬಾರಿ ಒಂದು ವಾರ ಮುಂಚಿತವಾಗಿಯೇ ಮುಂಗಾರಿನ ಆಗಮನವಾಗಲಿದೆ. ಮೇ 27ಕ್ಕೆ ಮುಂಗಾರು ಆಗಮನವಾದರೂ ರಾಜ್ಯಕ್ಕೆ ಮೇ ಅಂತ್ಯ ಇಲ್ಲವೆ ಜೂನ್ 1ರಂದು ಮುಂಗಾರು ಪ್ರವೇಶ ಮಾಡುವ ಸಾಧ್ಯತೆಗಳಿವೆ. ಮುಂಗಾರು ಮಳೆ ಜೂನ್‍ನಿಂದ ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಬೀಳಲಿದೆ. ನಿಗದಿತ ಅವಧಿಗಿಂತ ಮುನ್ನವೇ ಮುಂಗಾರು ಆರಂಭವಾದರೂ ಆಗಸ್ಟ್, ಸೆಪ್ಟೆಂಬರ್‍ನಲ್ಲಿ ಮುಂಗಾರು ದುರ್ಬಲಗೊಂಡು ಮಳೆ ಕೊರತೆ ಎದುರಿಸುವ ಸಾಧ್ಯತೆಗಳು ಗೋಚರಿಸುತ್ತಿವೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸತತವಾಗಿ ಮಳೆ ಬೀಳುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಬಿರುಸುಗೊಂಡಿದ್ದು, ಪೂರ್ವ ಮುಂಗಾರಿನ ಬೆಳೆಗಳನ್ನು ರೈತರು ಬಿತ್ತುತ್ತಿದ್ದಾರೆ. ಹಾಗೆಯೇ ಮುಂಗಾರು ಹಂಗಾಮಿಗೆ ಸಿದ್ಧತೆಯನ್ನೂ ತೊಡಗಿದ್ದಾರೆ.

ಗುಡುಗು, ಮಿಂಚಿನ ಸಾಧ್ಯತೆ: ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಗುಡುಗು/ಮಿಂಚಿನ ಸಾಧ್ಯತೆ ಇದೆ.  ಮೀನುಗಾರರಿಗೆ ಎಚ್ಚರಿಕೆ: ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 40-50 ಕಿ.ಮೀ.ತಲುಪುವ ಸಾಧ್ಯತೆಯಿದ್ದು, ಮೀನುಗಾರರು ಈ ಅವಧಿಯಲ್ಲಿ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News