ಲಿಂಗಾಯತ, ವೀರಶೈವರನ್ನು ಓಬಿಸಿಗೆ ಸೇರಿಸಿ: ಈಶ್ವರ ಖಂಡ್ರೆ ಒತ್ತಾಯ

Update: 2022-05-15 15:03 GMT

ಬೆಂಗಳೂರು, ಮೇ 15: ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಲಿಂಗಾಯತ ಮತ್ತು ವೀರಶೈವ ಸಮುದಾಯವನ್ನು ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಒತ್ತಾಯಿಸಿದರು.

ರವಿವಾರ ಇಲ್ಲಿನ ಆರ್‍ಟಿ ನಗರದ ತರಳಬಾಳು ಕೇಂದ್ರದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ವರಿಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಜಗತ್ತಿಗೆ ಕಟ್ಟಿಕೊಟ್ಟವರೇ ಬಸವಾದಿ ಪ್ರಮಥರು, ಆದರೆ ಬಸವತತ್ವ ಅನುಯಾಯಿಗಳಾದ ಲಿಂಗಾಯತ ವೀರಶೈವರೇ ಇಂದು ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವುದು ನಿಜಕ್ಕೂ ದೌರ್ಭಾಗ್ಯ ಎಂದರು.

ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವೀರಶೈವ ಮತ್ತು ಲಿಂಗಾಯತ ಸಮುದಾಯದ ಜನರಿದ್ದು, ಕರ್ನಾಟಕದಲ್ಲಿ ಸುಮಾರು ಶೇ.18ರಿಂದ 20ರಷ್ಟು ಲಿಂಗಾಯಿತ-ವೀರಶೈವರಿದ್ದಾರೆ ಎಂದು ಜನಗಣತಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ವಿವರಿಸಿದರು.

ವೀರಶೈವ ಮತ್ತು ಲಿಂಗಾಯತರು ಮುಂದುವರಿದವರು ಎಂದು ಕೆಲವರು ವಾದಿಸುತ್ತಾರೆ. ಆದರೆ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿಯೂ ಅತ್ಯಂತ ಹಿಂದುಳಿದಿರುವ ಸಮುದಾಯದಲ್ಲಿ ಲಿಂಗಾಯತ ವೀರಶೈವ ಸಮುದಾಯ ಸೇರುತ್ತದೆ ಎಂದ ಅವರು,
ಲಿಂಗಾಯತ-ವೀರಶೈವರಲ್ಲಿ ಸುಮಾರು 88ರಿಂದ 90 ಉಪ ಪಂಗಡಗಳಿವೆ. ಆದರೆ ಈ ಪೈಕಿ ಕೇವಲ 14 ಉಪ ಪಂಗಡಗಳನ್ನು ಮಾತ್ರ ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಉಳಿದ 76 ಉಪ ಪಂಗಡಗಳ ಜನರಿಗೆ ಅನ್ಯಾಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಎಲ್ಲ ಉಪ ಪಂಗಡಗಳನ್ನೂ ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಸೇರಿಸುವಂತೆ ವೀರಶೈವ ಮಹಾಸಭಾ ಒತ್ತಾಯಿಸುತ್ತಿದ್ದು, ಬೇಡಿಕೆಯ ಈಡೇರಿಕೆಗಾಗಿ ರಾಜ್ಯವ್ಯಾಪಿ ಹೋರಾಟ ನಡೆಸಲೂ ತೀರ್ಮಾನಿಸಿದೆ ಎಂದು ತಿಳಿಸಿದರು. 

ಕೇಂದ್ರದ ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಲಿಂಗಾಯತರಿಗಿಂತಲೂ ಉತ್ತಮ ಸ್ಥಿತಿಯಲ್ಲಿರುವ ಹಲವು ಜಾತಿಗಳಿದ್ದರೂ, ಮಂಡಲ್ ಆಯೋಗದ ವರದಿಯ ಬಳಿಕ ವೀರಶೈವ ಮತ್ತು ಲಿಂಗಾಯಿತ ಸಮುದಾಯವನ್ನು ಈ ಪಟ್ಟಿಯಿಂದ ಕೈಬಿಟ್ಟಿರುವ ಪರಿಣಾಮ ಇಂದು ಈ ಸಮುದಾಯ ಶೈಕ್ಷಣಿಕವಾಗಿ ಮತ್ತು ಸರಕಾರಿ ಉದ್ಯೋಗ ಎರಡರಲ್ಲೂ ಅನ್ಯಾಯಕ್ಕೆ ಒಳಗಾಗಿದೆ. ಹೀಗಾಗಿ ಈ ಕೂಡಲೇ ರಾಜ್ಯ ಸರಕಾರ ಲಿಂಗಾಯಿತ ಮತ್ತು ವೀರಶೈವ ಸಮುದಾಯದ ಎಲ್ಲ ಉಪ ಪಂಗಡಗಳನ್ನು ಇತರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಮನವಿ ಸಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News