ರಾಜ್ಯಾದ್ಯಂತ ಸೋಮವಾರ ಸರಕಾರಿ ಶಾಲೆ ಆರಂಭ

Update: 2022-05-15 15:30 GMT

ಬೆಂಗಳೂರು, ಮೇ 15: ಶಿಕ್ಷಣ ಇಲಾಖೆಯು ರಾಜ್ಯದಲ್ಲಿ ನಾಳೆಯಿಂದ (ಮೇ 16) ಕಲಿಕಾ ಚೇತರಿಕೆ ಕಾರ್ಯಕ್ರಮದೊಂದಿಗೆ ಸರಕಾರಿ ಶಾಲೆಗಳನ್ನು ಆರಂಭಿಸಲಾಗುತ್ತಿದೆ.

ಎರಡು ವರ್ಷಗಳಿಂದ ಕೊರೊನ ಸೋಂಕು ಹೆಚ್ಚಿದ ಪರಿಣಾಮ, ಶೈಕ್ಷಣಿಕ ಅವಧಿ ಕಡಿಮೆಯಾಗಿದ್ದು, ಅದನ್ನು ಸರಿದೂಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಆರಂಭಿಸಿದೆ. ಯೋಜನೆ ಅಡಿಯಲ್ಲಿ 1ರಿಂದ 9ನೆ ತರಗತಿಯ ವಿದ್ಯಾರ್ಥಿಗಳು ತಾವು ಕಲಿತ ಹಿಂದಿನ ಎರಡು ವರ್ಷಗಳ ವಿಷಯಗಳನ್ನು ಅಭ್ಯಾಸ ಮಾಡಬೇಕಿದೆ. ಪ್ರತಿವರ್ಷ ಮೇ 29ರಂದು ಶಾಲೆಗಳು ಪ್ರಾರಂಭವಾಗುತ್ತಿದ್ದವು.

ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗಿದೆ. ಈ ಯೋಜನೆಯು ವರ್ಷವಿಡೀ ನಡೆಯಲಿದ್ದು, 2022-23ನೆ ಸಾಲಿನ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷವೆಂದು ಘೋಷಿಸಲಾಗಿದೆ.

ಶಿಕ್ಷಣ ಇಲಾಖೆಯು ಮಕ್ಕಳಿಗೆ ತರಬೇತಿ ನೀಡುವ ಶಿಕ್ಷಕರಿಗೆ ಪ್ರತ್ಯೇಕ ಕೈಪಿಡಿಯನ್ನು ತಯಾರಿಸಲಾಗಿದೆ. ಕೈಪಿಡಿ ಮತ್ತು ಕಲಿಕಾ ಹಾಳೆ ಆಧರಿಸಿ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಾರೆ. ಪ್ರತಿ ತರಗತಿಯಲ್ಲೂ ಹಿಂದಿನ ಎರಡು ವರ್ಷಗಳ ಅಗತ್ಯ ಕಲಿಕಾ ಫಲಗಳು, ಪ್ರಸ್ತುತ ತರಗತಿಯ ಅಗತ್ಯ ಕಲಿಕಾ ಫಲಗಳನ್ನು ಆಧರಿಸಿ ಕಲಿಕಾ ಸಾಮಗ್ರಿಗಳನ್ನು ಸಿದ್ಧಪಡಿಸಲಾಗಿದೆ.

ಪ್ರತಿ ವಿಷಯದ ಕಲಿಕಾ ಹಾಳೆ ಪುಸ್ತಕವು 150 ಪುಟಗಳನ್ನು ಒಳಗೊಂಡಿದೆ. ಕಲಿಕಾ ಹಾಳೆಯಲ್ಲಿ ಹಿಂದಿನ ಎರಡು ವರ್ಷಗಳ ವಿಷಯಗಳು ಮಕ್ಕಳಿಗೆ ಎಷ್ಟು ಅರ್ಥವಾಗಿವೆ ಎಂಬುದನ್ನು ಮೌಲ್ಯಮಾಪನ ಮಾಡಿ ಶಿಕ್ಷಕರು ಅಂಕ ನೀಡುತ್ತಾರೆ. ಆಯ್ದ ಶಿಕ್ಷಕರಿಗೆ ಸರಕಾರದಿಂದ ಈಗಾಗಲೇ ರಾಜ್ಯ ಮಟ್ಟದಲ್ಲಿ ತರಬೇತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News