ನಗರದ ಸಮೀಪದಲ್ಲೇ ಬೀಡು ಬಿಟ್ಟ 9 ಕಾಡಾನೆಗಳು: ಆತಂಕಕ್ಕೊಳಗಾಗಿರುವ ಚಿಕ್ಕಮಗಳೂರಿನ ಜನತೆ

Update: 2022-05-15 15:45 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಮೇ 15: ಕಾಫಿನಾಡಿನ ಜನರಿಗೆ ಮತ್ತೆ ಕಾಡಾನೆಗಳ ಉಪಟಳ ಆರಂಭವಾಗಿದೆ. ಕಳೆದೊಂದು ತಿಂಗಳ ಹಿಂದೆ ತಾಲೂಕಿನ ಆಲ್ದೂರು ಭಾಗದಲ್ಲಿ ಕಾರ್ಮಿಕ ಮಹಿಳೆಯೊಬ್ಬರನ್ನು ಬಲಿ ಪಡೆದ ಕಾಡಾನೆ ನಗರ ಸಮೀಪದ ಗ್ರಾಮಗಳ ಹೊಲ ಗದ್ದೆಗಳಲ್ಲಿ ಬೀಡು ಬಿಟ್ಟು ಜನರಲ್ಲಿ ಭೀತಿ ಮೂಡಿಸಿತ್ತು. ಈ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದು ಸ್ಥಳಾಂತರ ಮಾಡಿದ ಕೆಲವೇ ದಿನಗಳಲ್ಲಿ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ದಂಡು ದಾಳಿ ಇಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ರವಿವಾರ ಬೆಳಗಿನ ಜಾವ 2 ಮರಿ ಆನೆಗಳೂ ಸೇರಿದಂತೆ ಒಟ್ಟು 9 ಆನೆಗಳ ಹಿಂಡು ನಗರಕ್ಕೆ ಸಮೀಪದಲ್ಲೇ ಇರುವ ಕದ್ರಿಮಿದ್ರಿ ಬಡಾವಣೆಗೆ ಹೊಂದಿಕೊಂಡಿರುವ ಅಕೇಶಿಯಾ ತೋಪಿನ ಬಿದಿರುಮೆಳೆಯಲ್ಲಿ ಬೀಡು ಬಿಟ್ಟಿದ್ದು, ಸ್ಥಳೀಯ ಜನರಲ್ಲಿ ಭಾರೀ ಆತಂಕ ಮೂಡಿಸಿವೆ. ಈ ಆನೆಗಳು ಬೆಳಗ್ಗೆಯಿಂದ ಸಂಜೆವರೆಗೂ ಕದ್ರಿಮಿದ್ರಿಯಲ್ಲೇ ಬೀಡು ಬಿಟ್ಟಿದ್ದು, ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಆನೆಗಳ ಚಲನವಲನಗಳನ್ನು ಗಮನಿಸುತ್ತಿದ್ದಾರೆ. ಆನೆಗಳು ಬೀಡು ಬಿಟ್ಟಿರುವ ಜಾಗದತ್ತ ಸಾರ್ವಜನಿಕರು ತೆರಳದಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಲಾಖೆ ಸಿಬ್ಬಂದಿ ಧ್ವನಿವರ್ಧಕಗಳ ಮೂಲಕ ಬೆಳಗ್ಗೆಯಿಂದ ಸಂಜೆವರೆಗೂ ಸ್ಥಳೀಯ ಗ್ರಾಮಸ್ಥರನ್ನು ಎಚ್ಚರಿಸುವ ಕಾರ್ಯದಲ್ಲಿ ನಿರತರಾಗಿದ್ದರು.

ಆನೆಗಳ ಗುಂಪಿನಲ್ಲಿ ಗಂಡಾನೆ, ಹೆಣ್ಣಾನೆಗಳೊಂದಿಗೆ ಎರಡು ಮರಿ ಆನೆಗಳೂ ಇದ್ದು, ಮರಿ ಆನೆಗಳಿರುವ ಕಾರಣಕ್ಕೆ ಹೆಣ್ಣಾನೆ, ಗಂಡಾನೆಗಳು ಜನರ ಮೇಲೆ ದಾಳಿ ಮಾಡುವ ಸಾಧ್ಯತೆಗಳಿರುವುದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಭಾರೀ ಎಚ್ಚರಿಕೆ ವಹಿಸಿದ್ದಾರೆ. 9 ಕಾಡಾನೆಗಳ ಗುಂಪಿನಲ್ಲಿ ಭುವನೇಶ್ವರಿ ಎಂಬ ಆನೆಯೂ ಇದ್ದು, ಈ ಆನೆಗೆ ಸಕಲೇಶಪುರದಲ್ಲಿ ರೇಡಿಯೋ ಕಾಲರ್ ಹಾಕಿ ಕಾಡಿಗೆ ಬಿಡಲಾಗಿತ್ತು. ಚಿಕ್ಕಮಗಳೂರು ಅರಣ್ಯ ಇಲಾಖೆ ಸಿಬ್ಬಂದಿ ಈ ಆನೆಯ ರೇಡಿಯೋ ಕಾಲರ್ ಮೂಲಕ ಕಾಡಾನೆಗಳ ಚಲನವಲನಗಳ ಮೇಲೆ ನಿಗಾವಹಿಸಿದ್ದಾರೆ.

ಕಳೆದ ಒಂದು ವಾರದಿಂದ ಈ ಆನೆಗಳು ಮಲೆನಾಡಿನಲ್ಲಿ ಬೀಡುಬಿಟ್ಟಿದ್ದು, ತಾಲೂಕಿನ ಮಾವಿನಹಳ್ಳಿ, ಆಲ್ದೂರು ಭಾಗದ ಕಾಫಿತೋಟಗಳಲ್ಲಿ ಕಾಣಿಸಿಕೊಂಡಿದ್ದವು. ಅಲ್ಲಿಂದ ಚಿಕ್ಕಮಗಳೂರು ನಗರ ಸಮೀಪಕ್ಕೆ ಬಂದು ಬೀಡು ಬಿಟ್ಟಿವೆ. ತಾಲೂಕು ವ್ಯಾಪ್ತಿಯ ಅರಣ್ಯ, ಕಾಫಿ ತೋಟಗಳಲ್ಲಿ ಕಾಡಾನೆಗಳ ಸಂಚರಿಸುತ್ತಿದ್ದ ಹಿನ್ನೆಲೆಯಲ್ಲಿ ಕಾಫಿ ತೋಟಗಳ ಕೆಲಸಕ್ಕೆ ಕಾರ್ಮಿಕರು ಪ್ರಾಣಭೀತಿಯಿಂದ ಗೈರಾಗುತ್ತಿದ್ದಾರೆ. ಕಾಡಾನೆಗಳ ಕಾಟದಿಂದ ಕಾಫಿ ತೋಟಗಳ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಕೆಲ ತೋಟಗಳ ಮಾಲಕರು ಕಾರ್ಮಿಕರನ್ನು ಮನೆಗೆ ಕಳುಹಿಸುತ್ತಿರುವ ಬಗ್ಗೆ ವರದಿಯಾಗಿದೆ.

ಜಿಲ್ಲೆಯ ಕಾಫಿ ತೋಟಗಳಲ್ಲಿ ಸದ್ಯ ಗೊಬ್ಬರ ಮತ್ತು ಸ್ಪ್ರೇ ಮಾಡುವ ಕೆಲಸ ಆರಂಭಗೊಳ್ಳುತ್ತಿದ್ದು, ಪ್ರಾಣಾಪಾಯ ಸಂಭವಿಸುವ ಮುನ್ನ ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಈ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಮತ್ತು ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕರಲ್ಲಿ ಆನೆಗಳಿರುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಆನೆಗಳು ಹಾಸನ ಜಿಲ್ಲೆಯ ಬೇಲೂರು ಸಕಲೇಶಪುರ ಮಾರ್ಗವಾಗಿ ಬಂದಿದ್ದು, ಮೂಡಿಗೆರೆ ಭಾಗದ ಕಾಡು, ಕಾಫಿ ತೋಟಗಳ ಮಾರ್ಗವಾಗಿ ಆಲ್ದೂರು, ಕೆ.ಆರ್.ಪೇಟೆ ಮಾರ್ಗವಾಗಿ ಚಿಕ್ಕಮಗಳೂರು ನಗರದ ಇಂಡಸ್ಟ್ರೀಯಲ್ ಏರಿಯಾ ಸಮೀಪದ ಅಕೇಶಿಯಾ ತೋಪಿನಲ್ಲಿ ಬೀಡು ಬಿಟ್ಟಿವೆ. ಸಾರ್ವಜನಿಕರಲ್ಲಿ ಭೀತಿ ಮೂಡಿಸಿರುವ ಕಾಡಾನೆಗಳನ್ನು ಕಾಡಿಗೆ ಓಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

ಕದ್ರಿಮಿದ್ರಿ ಅಕೇಶಿಯಾ ತೋಪಿಯಲ್ಲಿ 2 ಮರಿ ಸೇರಿದಂತೆ 9 ಆನೆಗಳು ಬೀಡು ಬಿಟ್ಟಿವೆ. ಆಹಾರ ಅರಸಿ ಇತ್ತ ಬಂದಿವೆ. 1 ಆನೆಯಲ್ಲಿ ರೇಡಿಯೋ ಕಾಲರ್ ಇರುವುದರಿಂದ ಎಲ್ಲ ಆನೆಗಳ ಚಲನವಲನಗಳನ್ನು ಗಮನಿಸಲು ಸಾಧ್ಯವಾಗಿದೆ. ಸಂಜೆ ವೇಳೆ ಅರಣ್ಯ ಇಲಾಖೆಯ 50 ಸಿಬ್ಬಂದಿ ಮೂಲಕ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಲಾಗುವುದು. ಆನೆಗಳು ಬೀಡು ಬಿಟ್ಟಿರುವ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗಿದೆ.

- ಕ್ರಾಂತಿ, ಡಿಎಫ್‍ಒ, ಚಿಕ್ಕಮಗಳೂರು
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News