ದೈವ ನರ್ತಕರಿಂದ ಜಾತಿ ನಿಂದನೆ ಆರೋಪ; ಪ್ರಕರಣ ದಾಖಲು

Update: 2022-05-15 16:49 GMT

ಸುಳ್ಯ : ದೈವ ನರ್ತಕ ಬಾಳಿಲ ಗ್ರಾಮದ ಬಾಳಿಲ ನಿವಾಸಿ ಶೇಷಪ್ಪ ಪರವರು, ಜ್ಯೋತಿಷಿ ಸತ್ಯನಾರಾಯಣ ಭಟ್ಟರು ತನಗೆ ಮತ್ತು ತನ್ನ ಜಾತಿಗೆ ಅವಮಾನ ಮಾಡಿರುವುದಲ್ಲದೆ ತನಗೆ ಎಲ್ಲಿಯೂ ದೈವ ನರ್ತನ ಸೇವೆ ಮಾಡಲು ಬಿಡುವುದಿಲ್ಲವೆಂದು ಹೇಳಿ ವೃತ್ತಿಗೆ ಅಡ್ಡಿಪಡಿಸುವ ಕಾರ್ಯ ಎಸಗಿದ್ದಾರೆ. ಇದಕ್ಕೆ ಕ್ಷೇತ್ರದ ತಂತ್ರಿ ಸ್ಥಾನದ ಜವಾಬ್ದಾರಿಯ ಕೆದಿಲ ನರಸಿಂಹ ಭಟ್ಟರು ಕುಮ್ಮಕ್ಕು ನೀಡಿದ್ದಾರೆಂದು ಆರೋಪಿಸಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ದೂರು ನೀಡಿದ್ದು, ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ದೂರು ನೀಡಿದ ಬಾಳಿಲ ನಿವಾಸಿ ಶೇಷಪ್ಪ ಪರವರು ತಮ್ಮ ದೂರಿನಲ್ಲಿ "ತಾನು ಸುಳ್ಯ ತಾಲೂಕಿನ ಕಳಂಜ ಗ್ರಾಮದ ಅಯ್ಯನಕಟ್ಟೆ ಎಂಬಲ್ಲಿ ಕಳೆದ ಮೂರು ವರ್ಷಗಳಿಂದ ದೈವ ನರ್ತನ ಮಾಡಿಕೊಂಡು ಬರುತ್ತಿದ್ದು, ಕೆಲವರ ಆಣತಿಯಂತೆ ತಾನು ನಡೆದುಕೊಂಡಿಲ್ಲವೆಂದು ದ್ವೇಷದಿಂದ ವಿವಿಧ ವಿಚಾರಗಳನ್ನು ಮುಂದಿಟ್ಟು ವಿರೋಧಿಸುತ್ತಾ ಬಂದಿರುತ್ತಾರೆ. ಅದೇ ಕಾರಣವನ್ನು ಮುಂದಿಟ್ಟು ಕ್ಷೇತ್ರದ ಜೀರ್ಣೋದ್ಧಾರಕ್ಕೆ ಶ್ರಮಿಸಿದ ದಾನಿಗಳ ಗಮನಕ್ಕೆ ತಾರದೆ ತನ್ನನ್ನು ವಿರೋಧಿಸುವವರಿಗೆ ಮಾತ್ರ ತಿಳಿಸಿ ಪಂಜದ ದೈವಜ್ಞ ಸತ್ಯನಾರಾಯಣ ಭಟ್ಟರನ್ನು ಬರಮಾಡಿ ಕ್ಷೇತ್ರದಲ್ಲಿ ಪ್ರಶ್ನಾ ಚಿಂತನೆಯನ್ನು ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಕೇವಲ ತನ್ನ ಬಗ್ಗೆ ಮಾತ್ರ ಮಾತನಾಡಿ ತಾನು ಇನ್ನು ಮುಂದೆ ದೈವ ನರ್ತನ ಮಾಡಬಾರದೆಂದು ತಾಕೀತು ಮಾಡಿರುವುದಲ್ಲದೆ, ಮಾನ ಹಾನಿಯಾಗುವಂತ ಮಾತುಗಳನ್ನಾಡಿದ್ದಾರೆ. ನಾನು ದೇವಸ್ಥಾನದ ತಂತ್ರಿಗಳನ್ನೇ ಬದಲಾಯಿಸಿದ್ದೇನೆ. ಇನ್ನು ಈ ಕೋಲ ಕಟ್ಟುವವ ಯಾವ ಲೆಕ್ಕ ಎಂದು ಹೇಳಿ ಕೋಲ ಕಟ್ಟುವವ ಎನ್ನುವ ಪದ ಬಳಕೆ ಮಾಡಿ ದೈವ ನರ್ತನ ಮಾಡುವ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಇದಲ್ಲದೆ ತಾನು ದೈವ ನರ್ತನ ಮಾಡುವ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪಾರ ಎಂಬಲ್ಲಿಯ ಪ್ರಶ್ನಾಚಿಂತನೆಯಲ್ಲಿಯೂ ಜ್ಯೋತಿಷಿ ಸತ್ಯನಾರಾಯಣ ಭಟ್ಟರು ತನಗೆ ದೈವ ನರ್ತನಕ್ಕೆ ಅವಕಾಶ ಮಾಡಿ ಕೊಡಬಾರದು. ಅಷ್ಟು ಮಾತ್ರವಲ್ಲ. ಆತನಿಗೆ ಚಪ್ಪಲಿಯಲ್ಲಿ ಹೊಡೆಸುತ್ತೇನೆ. ಮುಂದೆ ಆತ ಎಲ್ಲಿಯೂ ದೈವ ನರ್ತನ ಮಾಡಬಾರದು ಎಂದು ಹೇಳಿದ್ದು, ಇಷ್ಟಕ್ಕೆಲ್ಲಾ ಕಾರಣ ಊರಿನವರಾದ ಕೆದಿಲ ನರಸಿಂಹ ಭಟ್ಟರು. ದೈವ ನರ್ತನ ಸೇವೆಯ ಕಟ್ಟುಪಾಡುಗಳ ವಿರುದ್ಧವಾಗಿ ಕಾರ್ಯವನ್ನು ಮಾಡಲು ಹೇಳಿದಾಗ ಅವರು ಹೇಳಿದ್ದನ್ನು ತಾನು ಕೇಳುವುದಿಲ್ಲ ಎಂಬ ಕಾರಣಕ್ಕೆ ಜ್ಯೋತಿಷಿಯಲ್ಲಿ ಹೇಳಿಯೇ ಅಸೂಯೆಯಿಂದ ಈ ಕಾರ್ಯ ಮಾಡಿಸಿದ್ದಾರೆ. ಈ ರೀತಿ ನಿಂದನೆ ಮಾಡಿ ಮುಂದಕ್ಕೆ ಎಲ್ಲಿಯೂ ದೈವ ನರ್ತನಕ್ಕೆ ಅವಕಾಶ ಸಿಗದಂತೆ ಮಾಡುವುದು ಮತ್ತು ಇದರಿಂದ ಸಾರ್ವಜನಿಕರಿಗೆ ತನ್ನ ಮೇಲೆ ಅವಿಶ್ವಾಸ ಮೂಡುವಂತೆ ಮಾಡಿ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ತೊಂದರೆಯನ್ನುಂಟು ಮಾಡುವುದಾಗಿದೆ. ದೈವ ನರ್ತನಕ್ಕೆ ಅವಕಾಶ ತಪ್ಪಿದರೆ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಜೀವನೋಪಾಯಕ್ಕೆ ಕಷ್ಟವಾಗುವಂತಾಗಿದೆ. ಪದೇ ಪದೇ ತನ್ನನ್ನು ಮತ್ತು ತನ್ನ ಕುಲವನ್ನು ನಿಂದಿಸಿ ದೌರ್ಜನ್ಯ ಎಸಗಿದ್ದಾರೆ. ಆದ್ದರಿಂದ ಇವರಿಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ತನಗೆ ನ್ಯಾಯ ಒದಗಿಸಿಕೊಡಬೇಕೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News