ಮಾಜಿ ಸಚಿವ ಬಿ.ಜೆ.ಪುಟ್ಟಸ್ವಾಮಿ ಪೂರ್ಣಾನಂದಪುರಿ ಸ್ವಾಮೀಜಿಯಾಗಿ ಪೀಠಾರೋಹಣ

Update: 2022-05-15 18:23 GMT

ಬೆಂಗಳೂರು, ಮೇ 15: ಬೆಂಗಳೂರು ಉತ್ತರ ತಾಲೂಕಿನ ನಗರೂರು ಗ್ರಾಮದ ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಪ್ರಥಮ ಗುರುಗಳ ಪೀಠಾರೋಹಣ ಮಹೋತ್ಸವ ನಡೆದಿದೆ. ಮಾಜಿ ಸಚಿವ ಬಿ.ಜೆ.ಪುಟ್ಟಸ್ವಾಮಿ ಪೂರ್ಣಾನಂದಪುರಿ ಸ್ವಾಮೀಜಿಯಾಗಿ ಪೀಠಾರೋಹಣ ಮಾಡಿದ್ದಾರೆ.

ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ನಗರೂರು ಗ್ರಾಮ ಬಡಾವಣೆಯಲ್ಲಿರುವ ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದಲ್ಲಿ ರವಿವಾರ ಬೆಳಗ್ಗೆ 11.50ಕ್ಕೆ ಪೀಠಾರೋಹಣ ಹಾಗೂ ಪಟ್ಟಾಭಿಷೇಕ ಮಹೋತ್ಸವ ನಡೆಯಿತು.

ಕೈಲಾಸ ಆಶ್ರಮದ ಜಯೇಂದ್ರಪುರಿ ಶ್ರೀಗಳು ದೀಕ್ಷೆ ಬೋಧಿಸಿದರು. ನಾಡಿನ ವಿವಿಧ ಮಠಗಳ ಪೀಠಾಧಿಪತಿಗಳು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಸದ ಪಿ.ಸಿ.ಮೋಹನ್ ಪೀಠಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮಧ್ಯಂತರ ತಡೆಯಾಜ್ಞೆ: ಪುಟ್ಟಸ್ವಾಮಿ ಪೀಠಾರೋಹಣ ಮಾಡುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿತ್ತು. ಆದರೆ, ಈ ಆದೇಶಕ್ಕೂ ಮಠಕ್ಕೂ ಪೀಠಾರೋಹಣಕ್ಕೂ ಸಂಬಂಧವಿಲ್ಲ, ಪೂರ್ವ ನಿಗದಿಯಂತೆ ಪೀಠಾರೋಹಣ ಸಮಾರಂಭ ನಡೆಯಲಿದೆ ಎಂದು ಬಿ.ಜೆ.ಪುಟ್ಟಸ್ವಾಮಿ ಸ್ಪಷ್ಟಪಡಿಸಿದ್ದರು. 

ಮೇ 15ರಂದು ಕಾರ್ಯಕ್ರಮ ನಡೆಸಿ ಪೂರ್ಣಾನಂದ ಪುರಿ ಶ್ರೀ ಹೆಸರಿನಲ್ಲಿ ಪೀಠಾರೋಹಣ ಮಾಡಿದ್ದಾರೆ. ಜೂ.13ಕ್ಕೆ ವಿಚಾರಣೆ ದಿನಾಂಕ ನಿಗದಿಯಾಗಿದೆ. ಬಿ.ಜೆ.ಪುಟ್ಟಸ್ವಾಮಿ, ಅಖಿಲ ಕರ್ನಾಟಕ ಗಾಣಿಗ ಸಂಘದ ಆಡಳಿತಾಧಿಕಾರಿ ಎಂ.ಪಿ ಮಂಜುನಾಥ್ ಸೇರಿದಂತೆ ವಿಶ್ವ ಗಾಣಿಗ ಸಮುದಾಯದ ಟ್ರಸ್ಟ್‍ನ 10 ಮಂದಿ ಟ್ರಸ್ಟಿಗಳು ಮತ್ತು ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠಕ್ಕೆ ನ್ಯಾಯಾಲಯ ತುರ್ತು ನೋಟಿಸ್ ಜಾರಿ ಮಾಡಿದೆ. ಅಂದು ಪ್ರಕರಣದ ವಿಚಾರಣೆ ನಡೆಯಲಿದ್ದು, ಪುಟ್ಟಸ್ವಾಮಿ ಪೀಠಾರೋಹಣ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಜೊತೆಗೆ ಪೀಠಾರೋಹಣ ನ್ಯಾಯಾಂಗ ನಿಂದನೆಯಾಗಿದೆಯಾ ಎನ್ನುವ ಕುರಿತೂ ವಿಚಾರಣೆ ನಡೆಯುವ ಸಾಧ್ಯತೆ ಇದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News