ಓ ಮೆಣಸೇ...

Update: 2022-05-15 19:30 GMT

ವಯಸ್ಸಾದ ಗೋವುಗಳ ರಕ್ಷಣೆ ಮತ್ತು ಆರೈಕೆಯ ಸಮಸ್ಯೆಗೆ ವಿವಿಧ ಯೋಜನೆಗಳ ಮೂಲಕ ರಾಜ್ಯ ಸರಕಾರ ಪರಿಹಾರ ಹುಡುಕಿದೆ
-ಬಸವರಾಜ ಬೊಮ್ಮಾಯಿ, ಸಿಎಂ
 ವಯಸ್ಸಾದ ಮಾನವರಿಗೆ ಈ ಸೌಭಾಗ್ಯ ಪ್ರಾಪ್ತವಾಗಲು ಅವರು ಇನ್ನೆಷ್ಟು ಕಾಲ ಕಾಯಬೇಕು?

ದುಡ್ಡು ಕೊಟ್ಟು ಅಧಿಕಾರ ಹಿಡಿಯುವ ಭಂಡತನದ ವ್ಯವಸ್ಥೆ ಬಿಜೆಪಿಯಲ್ಲಿಲ್ಲ
-ಎಂ.ಪಿ.ರೇಣುಕಾಚಾರ್ಯ, ಶಾಸಕ
 ದುಡ್ಡಿನ ಜೊತೆ ಬೇರೆಯೂ ಬಹಳಷ್ಟನ್ನು ಕೊಡಬೇಕಾಗುತ್ತೆ ಅಂತಿದ್ದೀರಾ?

 ಬಿಜೆಪಿ ಸಿದ್ಧಾಂತ ಹಾಗೂ ಪ್ರಧಾನಿ ಮೋದಿಯ ಆಡಳಿತ ನೋಡಿ ಅನೇಕರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ
-ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
 ಅವ್ಯಾಹತ ದರೋಡೆಯ ಅವಕಾಶಗಳಿಗಾಗಿ ಕಾಯುತ್ತಿದ್ದವರಿಗೆ ಸುವರ್ಣಾವಕಾಶ ಕಾಣಿಸಿರಬೇಕು.

ಇತ್ತೀಚೆಗೆ ಮಾನವ ಹಾಗೂ ಕಾಡು ಪ್ರಾಣಿಗಳ ನಡುವೆ ಸಂಘರ್ಷ ಹೆಚ್ಚಾಗುತ್ತಿದ್ದು, ಇದಕ್ಕೆ ಪರಿಹಾರ ಹುಡುಕಬೇಕಾಗಿದೆ
-ಉಮೇಶ್ ಕತ್ತಿ, ಸಚಿವ
 ಕಾಡುಪ್ರಾಣಿಗಳಿಗೆ ಓಟು ಕೊಟ್ಟದ್ದಕ್ಕಾಗಿ ಮಾನವರು ಪಶ್ಚಾತ್ತಾಪ ಪಡುತ್ತಿದ್ದಾರೆ.
 
ಕಾಂಗ್ರೆಸ್‌ನಲ್ಲಿ ಉಸಿರುಗಟ್ಟುವ ವಾತಾವರಣ ಇದೆ
-ಪ್ರಮೋದ್ ಮಧ್ವರಾಜ್, ಮಾಜಿ ಸಚಿವ
 ಅಧಿಕಾರವಿಲ್ಲದಲ್ಲಿ ಉಸಿರುಗಟ್ಟಿದರೆ ಅದಕ್ಕೆ ಚಿಕಿತ್ಸೆ ಏನೆಂದು ವೈದ್ಯರ ಬಳಿ ಸಮಾಲೋಚಿಸಿ.

ಹೆಣ್ಮಕ್ಕಳ ಸ್ವರಕ್ಷಣೆಗೆ ಕರಾಟೆ ಕಲಿಕೆ ಪ್ರಯೋಜನವಾಗಿರುವುದರಿಂದ ವಸತಿ ಶಾಲೆಗಳಿಗೆ ಒಂದು ಸಾವಿರ ಕರಾಟೆ ಶಿಕ್ಷಕರನ್ನು ನಿಯೋಜಿಸುವ ಚಿಂತನೆ ಇದೆ
-ಕೋಟ ಶ್ರೀನಿವಾಸ ಪೂಜಾರಿ, ಸಚಿವ
 ಕರಾಟೆ ಎಂಬ ವಿದೇಶಿ ವಿದ್ಯೆಯ ಬದಲು ಸ್ವದೇಶಿ ಬಿಲ್ಲು ಬಾಣ ಕೊಟ್ಟು ಧನುರ್ವಿದ್ಯೆಯನ್ನು ಕಲಿಸಬಹುದಲ್ಲಾ!

ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಕೆಲಸ ಕೇಂದ್ರ ಸರಕಾರ ಮಾಡುತ್ತಿದೆ
-ಬಿ.ಸಿ.ನಾಗೇಶ್, ಸಚಿವ
 ಕೇಂದ್ರ ಸರಕಾರಕ್ಕೆ ನೈತಿಕತೆ ಕಲಿಸುವುದಕ್ಕೂ ಏನಾದರೂ ಏರ್ಪಾಡು ಮಾಡುವಿರಾ?

ಭಾರತದ ಪ್ರಾಚೀನ ಭಾಷೆಯಾಗಿರುವ ಸಂಸ್ಕೃತ ದೇಶದ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ
-ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ
ಇಲ್ಲಿನ ಬೇರೆಲ್ಲಾ ಭಾಷೆಗಳು ತುರ್ತು ಪರಿಸ್ಥಿತಿಯ ಬಳಿಕ ಹುಟ್ಟಿಕೊಂಡವೇ?

ರಾಜ್ಯ ಸರಕಾರ ಪ್ರಿಯಾಂಕ್ ಖರ್ಗೆಯನ್ನು ಜೈಲಿಗೆ ಹಾಕಿದರು ನಾವೂ ಅವರನ್ನು ಬಿಡಿಸಿಕೊಂಡು ಬರುತ್ತೇವೆ

-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ
ಹಾಗೆಲ್ಲಾ ಹೇಳಿದರೆ ಮೊದಲು ನಿಮ್ಮನ್ನು ಕಳಿಸ್ತಾರೆ.

ಗುಜರಾತ್‌ನಲ್ಲಿ ಜಾತಿ ರಾಜಕಾರಣ ಇರದ ಕಾರಣಕ್ಕಾಗಿಯೇ ಆ ರಾಜ್ಯವು ಅಭಿವೃದ್ಧಿ ಹೊಂದುತ್ತಿದೆ
-ಎಸ್.ಎಲ್.ಭೈರಪ್ಪ, ಸಾಹಿತಿ
 ಆ ಆದರ್ಶವನ್ನು ಕನ್ನಡನಾಡಿನಲ್ಲಿ ಅನುಷ್ಠಾನಿಸಲು ಮೊದಲು ನೀವು ನಿಮ್ಮ ಜಾತಿಗೆ ವಿದಾಯ ಹೇಳಬಹುದಲ್ಲಾ?

ಬಸವರಾಜ ಬೊಮ್ಮಾಯಿ ಸಿಎಂ ಆಗಲು ನಾನೇ ಕಾರಣ
-ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
 ಹೀಗೆಲ್ಲಾ ಹೇಳಿ ಯಾಕೆ ಜನತೆಯ ಶಾಪಕ್ಕೆ ತುತ್ತಾಗುತ್ತೀರಿ?

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ಸಾಹಿತ್ಯದ ಗೋಷ್ಠಿಗೂ ಅವಕಾಶ ಕಲ್ಪಿಸಬೇಕು
-ಎಚ್.ವಿಶ್ವನಾಥ್, ವಿ.ಪ. ಸದಸ್ಯ
ಮುಜ್ರಾ ಮಾಡುವುದಕ್ಕೆ ಅವಕಾಶ ಸಿಗಬೇಕೆಂಬ ಬೇಡಿಕೆ ಮೊದಲು ಇತ್ಯರ್ಥವಾಗಲಿ.

ರಿಸರ್ವ್ ಬ್ಯಾಂಕ್‌ನ ಇತ್ತೀಚಿನ ಬಡ್ಡಿ ದರ ಹೆಚ್ಚಳವು ಆಶ್ಚರ್ಯಕರವಲ್ಲ
-ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ಆಶ್ಚರ್ಯ, ಆಘಾತಗಳೆಲ್ಲಾ ಅಪರಾಧಗಳನ್ನು ಮಾಡಿದವರಿಗೆ ಆಗುವುದಿಲ್ಲ, ಆ ಅಪರಾಧಗಳ ಬಲಿ ಪಶುಗಳಿಗೆ ಆಗುತ್ತದೆ.

ಕಾಂಗ್ರೆಸ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೊರತುಪಡಿಸಿ ಉಳಿದವರೆಲ್ಲರೂ ಗೂಂಡಾಗಳು
-ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಒಮ್ಮೆ ಅವರ ಹತ್ತಿರ ಹೋಗಿ ಡಿಕೆಶಿಯನ್ನು ಹೊಗಳಿ ನೋಡಿ.

ಹೊಂದಾಣಿಕೆಯ ರಾಜಕೀಯ ದೇಶದ ರಾಜಕೀಯ ವ್ಯವಸ್ಥೆಯನ್ನು ಅಧಪತನಕ್ಕೆ ತಳ್ಳುತ್ತಿದೆ
-ಡಿ.ವಿ.ಸದಾನಂದ ಗೌಡ, ಸಂಸದ

ಆದ್ದರಿಂದ ದೇಶದ ಉದ್ಧಾರಕ್ಕೆ ಹಿಂಸೆ, ವಿಧ್ವಂಸ ಮತ್ತು ವೀಡಿಯೊಗಳು ಅನಿವಾರ್ಯ ಎಂದು ಸ್ಪಷ್ಟವಾಗಿ ಹೇಳಿ ಬಿಡಿ.

ಕಾಂಗ್ರೆಸ್‌ನ ಪುನರ್ ಸಂಘಟನೆಗೆ ವೇಗ ನೀಡಲು ಎಲ್ಲರ ಒಗ್ಗಟ್ಟು, ಬದ್ಧತೆ ಅಗತ್ಯವಿದೆ
-ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ


ಮೊದಲು ಪಕ್ಷವನ್ನು ಜೀವಂತಗೊಳಿಸಿ. ಉಳಿದ ಕೆಲಸಗಳನ್ನು ಆಮೇಲೆ ಮಾಡಬಹುದು. ಮೋದಿ ನೇತೃತ್ವದ ಸರಕಾರದ ಅಡಿಯಲ್ಲಿ ಭಾರತದ ರೂಪಾಯಿ ವೌಲ್ಯವು ಐಸಿಯುನಲ್ಲಿದೆ
-ರಣದೀಪ್ ಸಿಂಗ್ ಸುರ್ಜೆವಾಲ, ಕಾಂಗ್ರೆಸ್ ವಕ್ತಾರ
ಬಹುಕಾಲದಿಂದ ಐಸಿಯುನಲ್ಲಿರುವ ಪ್ರತಿಪಕ್ಷಗಳ ಆರೋಗ್ಯ ವಿಚಾರಿಸಲು ರೂಪಾಯಿ ಅಲ್ಲಿಗೆ ಹೋಗಿರಬೇಕು.

ನಮ್ಮ ದೇಶದ ಮಣ್ಣಿನಲ್ಲಿಯೇ ದ್ವೇಷ ಭಾವನೆ ಮೂಡದಂತೆ ಮಾಡುವ ಮಾನವೀಯ ಗುಣವಿದೆ
-ಅಂಗಾರ, ಸಚಿವ
 

ಆದ್ದರಿಂದಲೇ ಇರಬೇಕು, ನಾನು ಬೇರೆಯೇ ಮಣ್ಣಿನವನು ಎಂದು ಪ್ರಧಾನಿಯವರು ಕಿರುಚಾಡುತ್ತಿರುವುದು. ನಾನು ಯಾರಿಗೂ ಅರ್ಧ ಕಪ್ ಚಹಾ ಸಹ ಕುಡಿಸದೆ ಮಂತ್ರಿಯಾಗಿರುವೆ
-ಶಂಕರ ಪಾಟೀಲ, ಸಚಿವ


ಮಂತ್ರಿಯಾದ ಬಳಿಕವಾದರೂ ನಿಮ್ಮ ಧೋರಣೆಯಲ್ಲಿ ಸುಧಾರಣೆ ಆದೀತೆಂದು ನಿರೀಕ್ಷಿಸಿದ್ದ ಜನತೆ ನಿರಾಶರಾಗಿದ್ದಾರೆ. ಜೀವನದ ಕೊನೆ ಗಳಿಗೆಯಲ್ಲಿ ಒಂದು ಪ್ರಾದೇಶಿಕ ಪಕ್ಷವನ್ನು ಉಳಿಸಿ, ಅಧಿಕಾರಕ್ಕೆ ತಂದು ಕೊನೆಯುಸಿರು ಬಿಡಬೇಕೆಂದು ನನ್ನ ಆಸೆ
-ದೇವೇಗೌಡ, ಮಾಜಿ ಪ್ರಧಾನಿ
ನಾಳೆ ಅಹಿಂದ ಎಂಬೊಂದು ಪ್ರಾದೇಶಿಕ ಪಕ್ಷ ಕಣಕ್ಕೆ ಬಂದರೆ ಅದಕ್ಕೂ ಈ ಆಶೆ ಅನ್ವಯಿಸುವುದೇ?

ಪ್ರಮೋದ್ ಮುತಾಲಿಕ್ ಮತ್ತು ನಮ್ಮ ವಿಚಾರಧಾರೆ ಒಂದೇ ಆಗಿದೆ
-ನಳಿನ್ ಕುಮಾರ್ ಕಟೀಲು, ಸಂಸದ
 

ಕಾಲಾಳುಗಳ ವಿಚಾರಧಾರೆ ಸೂತ್ರಧಾರಿಗಳ ವಿಚಾರಧಾರೆಗಿಂತ ಭಿನ್ನವಾಗಿರಲು ಹೇಗೆ ತಾನೇ ಸಾಧ್ಯ? ಡಿ.ಕೆ.ಶಿವಕುಮಾರ್ ನೂರು ಜನ್ಮ ಎತ್ತಿ ಬಂದರೂ ನನ್ನ ಮುಖಕ್ಕೆ ಮಸಿ ಬಳಿಯಲು ಸಾಧ್ಯವಿಲ್ಲ
-ಡಾ.ಅಶ್ವತ್ಥ ನಾರಾಯಣ, ಸಚಿವ
ಯಾಕೆ, ಅವರು ಸಿದ್ದರಾಮಯ್ಯನವರ ಹಿಂದೆ ಅಷ್ಟೊಂದು ಬಿಝಿಯಾಗಿದ್ದಾರೆಯೇ?

ರಾಜ್ಯದಲ್ಲಿ ಕೋಮು ಗದ್ದಲ ಎಬ್ಬಿಸಿದರೆ ಮುಂಬರುವ ಚುನಾವಣೆಯಲ್ಲಿ ಮತಗಳು ಬರುತ್ತವೆ ಎಂಬ ತಪ್ಪು ಕಲ್ಪನೆ ಬಿಜೆಪಿ ಮುಖಂಡರಿಗಿದೆ
-ವೀರಪ್ಪ ಮೊಯ್ಲಿ, ಮಾಜಿ ಸಿಎಂ
 ತಪ್ಪು ಕಲ್ಪನೆಯನ್ನು ನಿವಾರಿಸಲು ಬಿಜೆಪಿಗೆ ಸೇರ್ಪಡೆಯಾಗುವ ಉದ್ದೇಶವೇನಾದರೂ ಇದೆಯೇ?

ಕ್ರಿಮಿನಲ್ ಕೇಸ್ ಇದ್ದವರಿಗೆ ಬಿಜೆಪಿಗೆ ಪ್ರವೇಶ ಇಲ್ಲ
-ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
 ಕ್ರಿಮಿನಲ್ ಎಂದು ಘೋಷಿತರಾಗಿರುವವರಿಗೆ ಮಾತ್ರ ಪ್ರವೇಶವೇ?

 ರಾಜ್ಯದಲ್ಲಿ ಈಗ ಮಾತ್ರ ಭ್ರಷ್ಟಾಚಾರ ನಡೆಯುತ್ತಿರುವುದಲ್ಲ, ನೆಹರೂ ಕಾಲದಿಂದಲೂ ನಡೆಯುತ್ತಿದೆ
-ಎಸ್.ಅಂಗಾರ, ಸಚಿವ
 ಆದ್ದರಿಂದ ಆ ಭವ್ಯ ಪರಂಪರೆಯನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿದ್ದೀರಾ?

ಪ್ರಧಾನಿ ಮೋದಿ ಒಂದು ಶ್ರೀಮಂತರಿಗೆ ಇನ್ನೊಂದು ಬಡವರಿಗೆ ಎಂಬ ಎರಡು ಭಾರತವನ್ನು ಸೃಷ್ಟಿಸಿದ್ದಾರೆ
-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
 ಎರಡನೆಯದನ್ನು ಅವರು ಸೃಷ್ಟಿಸಿದ್ದಲ್ಲ. ಅದು ಅವರು ಸೃಷ್ಟಿಸಿದ ಮೊದಲ ಭಾರತದ ಫಲಿತಾಂಶ ಮಾತ್ರ

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...