ರಾಜ್ಯದ ಶೇಕಡ 35ರಷ್ಟು ಮಕ್ಕಳಲ್ಲಿ ಬೆಳವಣಿಗೆ ಕುಂಠಿತ

Update: 2022-05-16 04:15 GMT
ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ಸರ್ಕಾರದ ಮಧ್ಯಾಹ್ನ ಬಿಸಿಯೂಟ ಮತ್ತು ಕ್ಷೀರ ಭಾಗ್ಯದಂಥ ಯೋಜನೆಗಳ ಹೊರತಾಗಿಯೂ ರಾಜ್ಯದಲ್ಲಿ ಐದು ವರ್ಷಕ್ಕಿಂತ ಕೆಳ ವಯಸ್ಸಿನ ಶೇಕಡ 35ರಷ್ಟು ಮಕ್ಕಳಲ್ಲಿ ಬೆಳವಣಿಗೆ ಕುಂಠಿತವಾಗಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ಬಹಿರಂಗಪಡಿಸಿದೆ. ಇದು ರಾಷ್ಟ್ರದ ಸರಾಸರಿಯಾಗಿರುವ ಶೇಕಡ 36ಕ್ಕಿಂತ ಸ್ವಲ್ಪ ಕಡಿಮೆ ಎಂದು deccanherald ವಿಶೇಷ ವರದಿ ಮಾಡಿದೆ.

ಕೃಶಕಾಯದ ತಾಯಂದಿರಿಗೆ ಹುಟ್ಟುವ ಮಕ್ಕಳ ಬೆಳವಣಿಗೆ ಕುಂಠಿತವಾಗಿರುತ್ತದೆ. ಬೆಳವಣಿಗೆ ಕೊರತೆ ನಗರ ಪ್ರದೇಶಗಳಿಂತ ಗ್ರಾಮೀಣ ಪ್ರದೇಶಗಳಲ್ಲಿ ಅಧಿಕ. ಕುಬ್ಜತೆ ಅಥವಾ ಕಡಿಮೆ ಎತ್ತರದ ಸಮಸ್ಯೆ ತೀವ್ರತರವಾದ ಪೌಷ್ಟಿಕಾಂಶ ಕೊರತೆಯ ಲಕ್ಷಣಗಳಾಗಿವೆ ಎಂದು ಮೇ 3ರಂದು ಬಿಡುಗಡೆ ಮಾಡಲಾದ ವರದಿಯಲ್ಲಿ ವಿವರಿಸಲಾಗಿದೆ.

ಬೆಂಗಳೂರಿನ ಅಕ್ಯೂರಾ ಆಸ್ಪತ್ರೆಯ ಪ್ರಸೂತಿ ತಜ್ಞೆ ಮತ್ತು ಮಕ್ಕಳ ಸಂರಕ್ಷಣಾ ತರಬೇತುದಾರರಾದ ಡಾ.ಎಸ್.ಸಲ್ಡಾನಾ ಹೇಳುವಂತೆ, "ಇವು ಎರಡು ಪ್ರಮುಖ ಅಂಶಗಳನ್ನು ಸೂಚಿಸುತ್ತವೆ. ಧೀರ್ಘಾವಧಿ ಅಪೌಷ್ಟಿಕತೆ ಮತ್ತು ಗ್ರಾಮೀಣ ಹಾಗೂ ನಗರ ಪ್ರದೇಶದ ಬಡಕುಟುಂಬಗಳಲ್ಲಿ ಆಹಾರ ಸೇವಿಸುವ ಕೊರತೆ. ಈ ಪೋಷಕರ ಪಾಲಕರು ಕೂಡಾ ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುವವರು" ಜತೆಗೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಾಂಕ್ರಾಮಿಕದಿಂದಾಗಿ ಪೌಷ್ಟಿಕ ಆಹಾರಗಳ ಅಂದರೆ ಬೇಳೆಕಾಳು, ಖಾದ್ಯ ತೈಲ, ತರಕಾರಿ ಮತ್ತು ಮಾಂಸಾಹಾರಿ ಉತ್ಪನ್ನಗಳ ಬೆಲೆ ಕೂಡ ಹೆಚ್ಚಿದ್ದು, ಇದು ಅಪೌಷ್ಟಿಕತೆ ಸಮಸ್ಯೆ ಹೆಚ್ಚಳಕ್ಕೆ ಕಾರಣ ಎಂದು ಅವರು ವಿಶ್ಲೇಷಿಸಿದ್ದಾರೆ.

ಗರ್ಭಿಣಿಯರ ಪೈಕಿ ಶೇಕಡ 40ರಷ್ಟು ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಶೇಕಡ 11ರಷ್ಟು ಶಿಶುಗಳಿಗೆ ಮಾತ್ರ ಸಾಕಷ್ಟು ಆಹಾರ ಸಿಗುತ್ತಿದೆ. ಬಿಸಿಯೂಟದ ಗುಣಮಟ್ಟ ತೀರಾ ಕಳಪೆ. ಇದರಲ್ಲಿ ಪ್ರೊಟೀನ್ ಅಂಶ ಇಲ್ಲವೇ ಇಲ್ಲ ಎಂದು ಹೇಳುತ್ತಾರೆ.

"ಬಿಸಿಯೂಟದಲ್ಲಿ ಮೊಟ್ಟೆ ನೀಡುತ್ತಿಲ್ಲ; ಈರುಳ್ಳಿ, ಬೆಳ್ಳುಳ್ಳಿಯನ್ನೂ ಸೇರಿಸುವುದಿಲ್ಲ. ಇದು ಬಡಮಕ್ಕಳ ಬೆಳವಣಿಗೆಗೆ ಮಾರಕವಾಗಿದೆ" ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News