ಪಿಎಸ್ಸೈ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ರಿಸರ್ವ್ ಸಬ್ ಇನ್ ಸ್ಪೆಕ್ಟರ್ ಸೇರಿ ಇಬ್ಬರ ಬಂಧನ

Update: 2022-05-16 12:56 GMT

ಬೆಂಗಳೂರು, ಮೇ 16: ಪಿಎಸ್ಸೈ ನೇಮಕಾತಿ ಪ್ರಕರಣ ಸಂಬಂಧ ತನಿಖೆ ಮುಂದುವರೆಸಿರುವ ಸಿಐಡಿ ಅಧಿಕಾರಿಗಳು, ರಿಸರ್ವ್ ಸಬ್ ಇನ್ಸ್‍ಪೆಕ್ಟರ್ (ಆರ್‍ಎಸ್ಸೈ) ಸೇರಿ ಇಬ್ಬರನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ಪೊಲೀಸ್ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಆರ್‍ಎಸ್ಸೈ ಬಸವರಾಜ್ ಗುರೋಲ್ ಹಾಗೂ ಪಿಎಸ್ಸೈ ಅಭ್ಯರ್ಥಿ ನಾರಾಯಣ್ ಎಂಬುವರನ್ನು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದಾರೆ.

ಹಲವು ವರ್ಷಗಳಿಂದ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಬಂಧಿತ ಆರೋಪಿಯಾಗಿರುವ ಡಿವೈಎಸ್ಪಿ ಶಾಂತಕುಮಾರ್ ಜೊತೆ ಬಸವರಾಜ್ ಕಾರ್ಯ ನಿರ್ವಹಿಸುತ್ತಿದ್ದ. ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎನ್ನುವ ಆರೋಪ ಕೇಳಿಬಂದಿದೆ.

ಇನ್ನೂ, ತಮ್ಮ ಸಂಪರ್ಕಕ್ಕೆ ಬರುವ ಆಭ್ಯರ್ಥಿಗಳ ಜೊತೆ ಮಾತುಕತೆ ನಡೆಸಿ ಹಣದ ವಹಿವಾಟು ನಡೆಸುತ್ತಿದ್ದ. ಜೊತೆಗೆ ಸ್ಟ್ರಾಂಗ್ ರೂಮ್‍ನಲ್ಲಿರಬೇಕಾದ ಓಎಂಆರ್ ಶೀಟ್ ಇರುವ ಪೆಟ್ಟಿಗೆ ಮನೆಯಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. 

ಈತನೊಂದಿಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊಕದ್ದಮೆಯಲ್ಲಿ 12ನೆ ಆರೋಪಿಯಾಗಿರುವ ನಾರಾಯಣ್‍ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ಆರೋಪಿ ಆರ್.ಡಿ.ಪಾಟೀಲ್ ಹಾಗೂ ದಿವ್ಯಾ ಹಾಗರಗಿ ಜೊತೆ ಹಣದ ಅವ್ಯವಹಾರ ನಡೆಸಿರುವುದು ತನಿಖೆಯಿಂದ ತಿಳಿದು ಬಂದಿದೆ. 

ಮತ್ತೊಂದೆಡೆ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಆರೋಪಿಗಳಾದ ಗಜೇಂದ್ರ ಹಾಗೂ ಮನುಕುಮಾರ್ ಅಭ್ಯರ್ಥಿಗಳು ಒಂದನೆ ಎಸಿಎಂಎಂ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News