ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆಟೋ ಚಾಲಕನ ಹತ್ಯೆ: ಜೀವಾವಧಿ ಶಿಕ್ಷೆ 10 ವರ್ಷಕ್ಕಿಳಿಸಿದ ಹೈಕೋರ್ಟ್

Update: 2022-05-16 15:28 GMT

ಬೆಂಗಳೂರು, ಮೇ 16: ಆಟೋ ಚಾಲಕರಿಬ್ಬರ ಜಗಳದ ವೇಳೆ ಓರ್ವ ಮತ್ತೋರ್ವನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಆರೋಪಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಕಡಿತಗೊಳಿಸಿ, 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. 

ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆಟೋ ಚಾಲಕ ದೀನದಯಾಳ್ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. 

ಪೀಠ ತನ್ನ ತೀರ್ಪಿನಲ್ಲಿ, ಆಟೋಗೆ ಹಾನಿಯಾಗಿದೆ ಎಂಬ ಕಾರಣಕ್ಕೆ ಇಬ್ಬರು ಚಾಲಕರ ನಡುವೆ ಜಗಳ ನಡೆದಿದೆ. ಹಠಾತ್ ಪ್ರಚೋದನೆಗೆ ಒಳಗಾಗಿ ಆರೋಪಿ ದೀನದಯಾಳ್ ಸ್ವಯಂ ನಿಯಂತ್ರಣ ಕಳೆದುಕೊಂಡು ಉದ್ವೇಗದಲ್ಲಿ ಚಾಲಕ ಕೇಶವ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. 

ಸುಟ್ಟಗಾಯಗಳ ಪರಿಣಾಮ ಕೇಶವ್ 29 ದಿನಗಳ ಬಳಿಕ ಸಾವನ್ನಪ್ಪಿದ್ದಾರೆ. ಆರೋಪಿ ದೀನದಯಾಳ್ ಕೊಲೆ ಮಾಡುವ ಉದ್ದೇಶ ಹೊಂದಿರಲಿಲ್ಲ. ಹೀಗಾಗಿ, ಕೇಶವ್ ಸಾವನ್ನು ಐಪಿಸಿ ಸೆಕ್ಷನ್ 302ರ ಅಡಿ ಕೊಲೆ ಎಂದು ಪರಿಗಣಿಸಲಾಗದು. ಬದಲಿಗೆ ಐಪಿಸಿ ಸೆಕ್ಷನ್ 304ರ ಅಡಿ ಅಪರಾಧಿಕ ನರಹತ್ಯೆ ಎಂದು ಪರಿಗಣಿಸಬೇಕಿದೆ. ಈ ಅಂಶವನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿಲ್ಲ ಎಂದು ಅಭಿಪ್ರಾಯಪಟ್ಟು, ಆರೋಪಿ ದೀನದಯಾಳ್‍ಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಮಾರ್ಪಡಿಸಿದೆ. ಅದರಂತೆ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಮೃತ ಕೇಶವ್ ತಂದೆ ತಾಯಿಗೆ ನೀಡುವಂತೆ ನಿರ್ದೇಶಿಸಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ 2 ವರ್ಷ ಜೈಲು ಶಿಕ್ಷೆ ಅನುಭವಿಸುವಂತೆ ಹೈಕೋರ್ಟ್ ಆದೇಶಿಸಿದೆ. 

ಪ್ರಕರಣವೇನು: 2012ರ ಆ.21ರಂದು ಬೆಂಗಳೂರಿನ ಇಟ್ಟಮಡು ಮುಖ್ಯ ರಸ್ತೆಯ ವಿಬಿಬಿ ಬೇಕರಿ ಬಳಿ ಸ್ಟ್ಯಾಂಡ್‍ನಲ್ಲಿ ಕೇಶವ್ ಆಟೋ ನಿಲ್ಲಿಸುವ ವೇಳೆ ದೀನದಯಾಳ್ ಆಟೋಗೆ ಢಿಕ್ಕಿಯಾಗಿ ಇಂಡಿಕೇಟರ್ ಜಖಂ ಆಗಿತ್ತು. ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿ ದೀನದಯಾಳ್ ಕೇಶವ್‍ನ್ನು ತಳ್ಳಿ ಕೆಳಗೆ ಬೀಳಿಸಿ ತನ್ನ ಆಟೋದಲ್ಲಿ ಪ್ಲಾಸ್ಟಿಕ್ ಬಾಟಲಿಯಲ್ಲಿಟ್ಟಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದನೆಂದು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 307 ಅಡಿ ಪ್ರಕರಣ ದಾಖಲಿಸಿದ್ದರು. ಸುಟ್ಟ ಗಾಯಗಳಿಂದ ಚೇತರಿಸಿಕೊಳ್ಳದೆ ಕೇಶನ್ 29 ದಿನಗಳ ಬಳಿಕ ಮೃತಪಟ್ಟಿದ್ದರು. ಬಳಿಕ 302 ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ನಗರದ 69ನೆ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ 2018ರ ಜ.10ರಂದು ಆರೋಪಿ ದೀನದಯಾಳ್‍ಗೆ ಐಪಿಸಿ ಸೆಕ್ಷನ್ 302ರ ಅಡಿ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News