ವಿದ್ಯಾ ಸಂಸ್ಥೆಯಲ್ಲಿ ಬಜರಂಗದಳದ ಶಸ್ತ್ರಾಸ್ತ್ರ ತರಬೇತಿ ಪ್ರಕರಣ: ದೂರು ದಾಖಲಿಸಿದ ಪಿಎಫ್‍ಐ

Update: 2022-05-16 16:11 GMT

ಮಡಿಕೇರಿ ಮೇ 16 : ಪೊನ್ನಂಪೇಟೆಯ ವಿದ್ಯಾ ಸಂಸ್ಥೆಯೊಂದರಲ್ಲಿ ನಡೆದ ತ್ರಿಶೂಲ ದೀಕ್ಷೆ ಮತ್ತು ನಿರ್ಜನ ಪ್ರದೇಶದಲ್ಲಿ ನಡೆದ ಏರ್ ಗನ್  ತರಬೇತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದುತ್ವ ಸಂಘಟನೆಗಳ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಸಮಿತಿ ಸದಸ್ಯ ಇಬ್ರಾಹಿಂ ಕೆ.ಎಚ್ ದೂರು ದಾಖಲಿಸಿದ್ದಾರೆ.

ಪೊನ್ನಂಪೇಟೆ ಪೊಲೀಸ್ ಠಾಣಾಧಿಕಾರಿಗಳಿಗೆ ದೂರು ನೀಡಿರುವ ಅವರು,. ವಿಶ್ವ ಹಿಂದೂ ಪರಿಷತ್, ಬಜರಂಗದಳ, ಆರೆಸ್ಸೆಸ್ ಮುಖಂಡರುಗಳು ಹಾಗೂ ಬಿಜೆಪಿ ಶಾಸಕರುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಪೊನ್ನಂಪೇಟೆ ತಾಲೂಕಿನ ಸಾಯಿ ಶಂಕರ್ ವಿದ್ಯಾ ಸಂಸ್ಥೆಯಲ್ಲಿ ಶೌರ್ಯ ಪ್ರಶಿಕ್ಷಣ ವರ್ಗ 2022 ಎಂಬ ಹೆಸರಿನಲ್ಲಿ ನಡೆದ ಶಿಬಿರದಲ್ಲಿ ಭಾಗವಹಿಸಿದ ಆರ್‍ಎಸ್‍ಎಸ್, ಭಜರಂಗದಳ, ಪಿಎಚ್‍ಪಿ ಕಾರ್ಯಕರ್ತರಿಗೆ ಬಂದೂಕು ತರಬೇತಿ ನೀಡಿದ ಹಾಗೂ ತ್ರಿಶೂಲ ವಿತರಣೆ ಮಾಡಿದ ಆಂತಕಕಾರಿ ವಿಡಿಯೋ ಚಿತ್ರಣ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. 

ವಿಎಚ್‍ಪಿ ಜಿಲ್ಲಾಧ್ಯಕ ಪಿ.ಕೃಷ್ಣಮೂರ್ತಿ, ರಘು ಸಕಲೇಶಪುರ, ಸಾಯಿ ಶಂಕರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಝರು ಗಣಪತಿ, ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಸೂರ್ಯ ನಾರಾಯಣ ಮತ್ತು ಪ್ರವೀಣ್ ಸಿದ್ದಾಪುರ ಮುಂತಾದವರು ಶಿಬಿರದಲ್ಲಿ ಭಾಗವಹಿಸಿ 120 ಕ್ಕಿಂತಲು ಅಧಿಕ ಶಿಬಿರಾರ್ಥಿಗಳಿಗೆ ಉತ್ತೇಜನ ನೀಡಿರುತ್ತಾರೆ. ಕೊಡಗು ಜಿಲ್ಲೆ ಶಾಂತಿ, ಸಹಬಾಳ್ವೆಗೆ ಹೆಸರಾಗಿದ್ದು, ತರಬೇತಿ ಶಿಬಿರಗಳಿಂದ ಮುಂದೊಂದು ದಿನ ಕೊಡಗು ಜಿಲ್ಲೆಯನ್ನು ಆತಂಕದ ತಾಣವನ್ನಾಗಿಸಲು ಹೊರಟಂತಿದೆ ಎಂದು ಇಬ್ರಾಹಿಂ ಕೆ.ಎಚ್ ದೂರಿನಲ್ಲಿ ಆರೋಪಿಸಿದ್ದಾರೆ.

ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಮುಖಂಡರು, ಶಾಸಕರು ಹಾಗೂ ಶಿಬಿರಾರ್ಥಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.  

ಎಸ್‍ಪಿಗೆ ದೂರು : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಸಮಿತಿ ಮೇ 17 ರಂದು ಪೊನ್ನಂಪೇಟೆ ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಿದೆ ಎಂದು ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಕಲೀಲ್ ಮಡಿಕೇರಿ ತಿಳಿಸಿದ್ದಾರೆ. 

ಮೇ 20 ರಂದು ಎಸ್‍ಡಿಪಿಐ ವತಿಯಿಂದ ಪ್ರತಿಭಟನೆ ನಡೆಸಿ ಸೂಕ್ತ ಕಾನೂನು ಕ್ರಮಕ್ಕಾಗಿ ಒತ್ತಾಯಿಸಲಾಗುವುದೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News